ವಿಶ್ವ ಶಾಂತಿ ದಿನಾಚರಣೆ- ಮಾನವೀಯತೆಗಾಗಿ ಸೌಹಾರ್ದ ನಡಿಗೆಗೆ ಚಾಲನೆ
ಕೋಲಾರ.ಸೆ.೨೨-ಶಾಂತಿ,ನೆಮ್ಮದಿ ಹುಡುಕಿದರೆ ಸಿಗದು ಅದು ನಮ್ಮ ನಡವಳಿಕೆಯಲ್ಲೇ ಇದೆ ಎಂಬುದನ್ನು ಅರಿತು ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸುವ ಸಂಕಲ್ಪ ಮಾಡಿ ನೆಮ್ಮದಿಯನ್ನು ತಮ್ಮದಾಗಿಸಿಕೊಂಡು ಸಮಾಜದಲ್ಲೂ ಶಾಂತಿ ಕಾಪಾಡಿಕೊಂಡು ಜೀವನ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಇಂದು ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಉತ್ತರ ವಿಶ್ವವಿದ್ಯಾಲಯ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಂತಿಗಾಗಿ ನಡಿಗೆ ವಾಕಥಾನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧುನಿಕ ಸಮಾಜದಲ್ಲಿ ಆರೋಗ್ಯ, ಶಾಂತಿ, ನೆಮ್ಮದಿ ಕಾಪಾಡಬೇಕೆಂದರೆ ಮೊದಲು ನಾವೆಲ್ಲ ಒಂದೇ ಎಂಬ ಭಾವನೆ ಬಲಗೊಳಿಸಬೇಕಾಗಿದೆ, ಈ ಹಿನ್ನಲೆಯಲ್ಲಿ ‘ಶಾಂತಿಗಾಗಿ ನಡಿಗೆ’ ಒಳ್ಳೆಯ ಪ್ರಯತ್ನವಾಗಿದೆ ಎಂದ ಅವರು, ಸಮಾಜದಲ್ಲಿ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ಇಂದು ಶಾಂತಿ ಮತ್ತು ನೆಮ್ಮದಿ ಪ್ರತಿಯೊಬ್ಬರಿಗೂ ಇರಬೇಕಾದ ಅವಶ್ಯಕತೆ ಎಂದ ಅವರು, ಅದನ್ನು ಹುಡುಕುವ ಪ್ರಯತ್ನದಲ್ಲಿ ನಮ್ಮ ಮನಸ್ಸು ತಾಳ್ಮೆ,ಸಹನೆ,ಭ್ರಾತೃತ್ವ ಹೊಂದಿ ಮುಂದೆ ಸಾಗಿದರೆ ಶಾಂತಿಯ ಯಶಸ್ಸು ನಮ್ಮ ಹೆಗಲೇರುತ್ತದೆ, ಉತ್ತಮ ಆರೋಗ್ಯಕ್ಕೂ ಶಾಂತಿ ಇಂದು ಅಗತ್ಯವಿದೆ, ಶಾಂತಿ ಕದಡಿದರೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಮ್ಮೊಂದಿಗೆ ಇಣುಕಿ ನೋಡುತ್ತದೆ ಎಂದರು.
ನಗರದಾದ್ಯಂತ ಸೌಹಾರ್ದ ನಡುಗೆ ಮಾಡಿದ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನಾವೆಲ್ಲ ಒಂದೇ ಭಾರತೀಯರು ನಾವು, ನಾವೆಲ್ಲಾ ಒಂದಾಗೋಣ ರಾಷ್ಟ್ರೀಯತೆ ಬೆಳೆಸೋಣ ಎಂದು ಸಾರುವ ಭಿತ್ತಿ ಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು.
ಜಿಲ್ಲೆಯ ೧೩ ಕಾಲೇಜುಗಳ ವಿದ್ಯಾರ್ಥಿಗಳು ೪ ಕಿ.ಮೀ ವಾಕಥಾನ್ ನಡೆಸಿದ ಈ ಜಾಥಾದಲ್ಲಿ ಪ್ರಾಂಶುಪಾಲ ಡಾ.ತ್ಯಾಗರಾಜ್ ಡಾ. ನಾರಾಯಣ್ ಡಾ.ಪ್ರಸನ್ನ ಕುಮಾರಿ ಡಾ. ಮುರಳಿಧರ್ ಡಾ.ನಿರ್ಮಲ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಜಿ.ಶ್ರೀನಿವಾಸ್, ಸಭಾಪತಿ ಡಾ.ಎನ್.ಗೋಪಾಲ ಕೃಷ್ಣಗೌಡ ಉಪಸಭಾಪತಿ ಸಭಾಪತಿ ಆರ್.ಶ್ರೀನಿವಾಸನ್ ಕಾರ್ಯದರ್ಶಿ ಎಸ್.ನಂದೀಶ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.