ಅಗತ್ಯ ಸೇವೆಗಳ ಮತದಾರರಿಗೆ ಮೇ 3ರವರೆಗೆ ಮತದಾನಕ್ಕೆ ಅವಕಾಶ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ.2: ಮೇ 7ರ ಮತದಾನ ದಿನ ಅಗತ್ಯ ಸೇವೆಗಳಲ್ಲಿ ನಿರತರಾಗುವ ನೌಕರರಿಗೆ ಮೇ 1ರಿಂದ 3ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ತಮ್ಮ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಸಹಾಯಕ ಆಯುಕ್ತರಾದ ಮಹದ್ ಅಲಿ ಅಕ್ರಮ ಹೇಳಿದರು.
ಏಪ್ರೀಲ್ 30ರಂದು ತಹಸೀಲ್ದಾರ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಹಾಲನಲ್ಲಿ ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. 09 ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಜಯನಗರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಯಿಂದ ನಮೂನೆ 12ಡಿ ಅಡಿ ಅರ್ಜಿ ಸ್ವೀಕರಿಸಲಾಗಿತ್ತು. ಈ ಅರ್ಜಿಗಳಲ್ಲಿನ ಗೈರು ಹಾಜರು ಮತದಾರರ ಸಿಬ್ಬಂದಿಗೆ ಅವರು ಮತದಾನದ ಹಕ್ಕನ್ನು ಹೊಂದಿರುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತದಾನ ಮಾಡಲು ಮತದಾನಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
ಅದೇ ರೀತಿ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯ ಕೇಂದ್ರದಲ್ಲಿ ಅಂಚೆ ಮತ ಕೇಂದ್ರ ಸ್ಥಾಪಿಸಲಾಗಿದೆ. ಮತದಾರರಿಗೆ ಈಗಾಗಲೇ 12-ಡಿ ನಮೂನೆ ವಿತರಿಸಿ ಭರ್ತಿ ಮಾಡಿದ ನಮೂನೆಯನ್ನು ಈಗಾಗಲೇ ಸ್ವೀಕರಿಸಲಾಗಿದೆ. ಮೇ 1ರಿಂದ ಮೇ 3 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ ಅವಧಿಯಲ್ಲಿ ಮತ ಚಲಾಯಿಸಬಹುದಾಗಿದೆ. ಈ ಮೂರು ದಿನಗಳ ಪೈಕಿ ಯಾವುದಾದರು ಒಂದು ದಿನ ಮತ ಚಲಾಯಿಸಬಹುದು. ಆದ್ದರಿಂದ ಈ ಮಾಹಿತಿಯನ್ನು ತಮ್ಮ ಕಚೇರಿಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಲು ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದು ಅವರು ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹೊಸಪೇಟೆ ತಹಸೀಲ್ದಾರ ಶ್ರುತಿ ಹಾಗೂ ಅಗತ್ಯ ಸೇವೆಗಳ ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಪಾಲ್ಗೊಂಡಿದ್ದರು.