ಹರಿಹರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ, : ಜಿ. ಬಿ. ವಿನಯ್ ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨: ನಾನು ಲೋಕಸಭೆ ಸದಸ್ಯನಾದರೆ ಹರಿಹರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಭರವಸೆ ನೀಡಿದರು.ಹರಿಹರ ತಾಲೂಕಿನ ಬಾನುವಳ್ಳಿ, ಮಲೇಬೆನ್ನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ವಿನಯ್ ಕುಮಾರ್ ಅವರಿಗೆ ಅಭಿಮಾನಿಗಳು, ಹಿತೈಷಿಗರು, ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡರು.ಬಾನುವಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಹರಿಹರ ತಾಲೂಕಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಆದ್ರೆ, ಹೇಳಿಕೊಳ್ಳುವಷ್ಟು ಕೆಲಸಗಳು ಆಗಿಲ್ಲ. ಈ ಬಾರಿ ಕ್ರಮ ಸಂಖ್ಯೆ 28, ಗ್ಯಾಸ್ ಸಿಲಿಂಡರ್ ಗೆ ಮತ ನೀಡಿ ವಿಜಯಶಾಲಿಯನ್ನಾಗಿ ಮಾಡಿದರೆ ಸಂಸದರು ಹೇಗೆ ಕೆಲಸ ಮಾಡಬೇಕು ಎಂಬುದನ್ನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.ಹರಿಹರೇಶ್ವರ ದೇವಾಲಯ, ಲಕ್ಷ್ಮೀ ದೇವಾಲಯ, ಕಾಲಭೈರವ, ಒಡಬಾಂಡೇಶ್ವರ, ತಾರಕೇಶ್ವರ, ಚಿಕ್ಕ ಹರಿಹರೇಶ್ವರ, ಕಾಶಿ ವಿಶ್ವನಾಥ, ಯೋಗೇಶ್ವರ, ಆಂಜನೇಯ, ಅಂಬಾಭವಾನಿ, ವಿಠ್ಠಲ ಮಂದಿರ, ಬಸವೇಶ್ವರ, ಶ್ರೀ ರಾಮದೇವರ ಗುಡಿ, ವೆಂಕಟರಮಣಸ್ವಾಮಿ, ಮಾರ್ಕಂಡೇಶ್ವರ ದೇವಾಲಯ, ಶ್ರೀ ವೀರಭದ್ರೇಶ್ವರ ಗುಡಿ, ಉಕ್ಕಡಗಾತ್ರಿ ದೇವಾಲಯವೂ ಸೇರಿದಂತೆ ಅನೇಕ ಧಾರ್ಮಿಕ, ಶ್ರದ್ಧಾ ಕೇಂದ್ರಗಳಿವೆ. ಈ ದೇವಾಲಯಗಳ ಅಭಿವೃದ್ಧಿ ಒತ್ತು ನೀಡಲಾಗುವುದು. ಪ್ರವಾಸೋದ್ಯಮ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತಾಗಲು ಕ್ರಮ ಕೈಗೊಳ್ಳಲಾಗುವುದು. ನನಗೆ ಅವಕಾಶ ಕೊಟ್ಟರೆ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.ಈ ವೇಳೆ ಭಾನುವಳ್ಳಿ ಗ್ರಾಮದ ವಿ. ನಾಗರಾಜ್, ಎಂ. ಮಾಂತೇಶ್, ಬಿ. ಎನ್. ಕರಿಯಪ್ಪ, ಬಿ. ಮಹಾದೇವಪ್ಪ, ಬಿ. ಚಂದ್ರಪ್ಪ, ಹೆಚ್. ಸುರೇಶ್, ಎ. ಲೋಕೇಶ್, ಜೋಗಪ್ಪರ ಸುರೇಶ, ಕೋಲ್ಕರ್ ನಾಗಪ್ಪ, ನಾಗರಾಜ ಶಿಕಾರಿಪುರ ಮತ್ತಿತರರು ಹಾಜರಿದ್ದರು.