ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿ-ಬಾಬುರಾಠೋಡ್
ಸಂಜೆವಾಣಿ ವಾರ್ತೆ
ದೇವದುರ್ಗ.ಮೇ.೦೨-
ಮೇ೭ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ವೋಟ್ ಹಾಕುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ತಾಪಂ ಇಒ ಬಾಬು ರಾಠೋಡ್ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾ ಹಾಗೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ ಇದ್ದಂತೆ. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದತ್ತವಾಗಿ ಮತದಾನ ಹಕ್ಕು ನೀಡಲಾಗಿದೆ. ಅದನ್ನು ವ್ಯರ್ಥ ಮಾಡದೆ ಚಲಾಯಿಸಬೇಕು ಎಂದರು.
ಜನರಿಗೆ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ, ತಾಪಂ ಎಡಿ ಅಣ್ಣರಾವ್, ಸಿಡಿಪಿಒ ಮಾಧವನಂದ್, ಟಿಎಚ್‌ಒ ಡಾ.ಬನದೇಶ್ವರ, ಬಿಇಒ ಎಚ್.ಸುಖದೇವ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಅಸುಂಡೆ, ಬಂದೋಲಿ ಸಾಬ್ ಇತರರಿದ್ದರು.