ಹತ್ತು ಜಿಲ್ಲೆಗಳಲ್ಲಿ ಎಸ್ಪಿ ಜಾಗೃತಿ ಸಮಾವೇಶ-ಲಲಿತಾ ನಾಯ್ಕ್
ಸಂಜೆವಾಣಿ ವಾರ್ತೆ
ದೇವದುರ್ಗ.ಮೇ.೦೨- ದೇಶದ ಸಂವಿಧಾನ ಹಾಗೂ ಆರ್ಥಿಕತೆ ಉಳಿಸಲು ಸೋಸಿಯಲಿಸ್ಟ್ ಪಾರ್ಟಿ(ಐ) ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದು ಉತ್ತರ ಕರ್ನಾಟಕ ೧೦ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೈತ್ರಿ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ ಎಂದು ಪಾರ್ಟಿ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಸೋಷಿಯಲಿಸ್ಟ್ ಪಾರ್ಟಿ ಕರ್ನಾಟಕ ಸೇರಿ ದೇಶದ ೧೨ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದನಂತರ ದೇಶದ ಶಾಂತಿಗೆ ಭಂಗಬಂದಿದೆ. ಸಾಮಾಜಿಕ ಚಿಂತನೆ ನೆಲಗಟ್ಟಿನಲ್ಲಿ ನಮ್ಮ ಪಕ್ಷ ಹೋರಾಟ ಮಾಡುತ್ತಿದೆ. ಸ್ವಾತಂತ್ರ್ಯವಾಗಿ ಸ್ಪರ್ಧಿಸಲು ನಮ್ಮಲ್ಲಿ ಆರ್ಥಿಕಶಕ್ತಿಯ ಕೊರತೆಯಿದೆ.
ಹೀಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದೇವೆ. ಕಾಂಗ್ರೆಸ್ ಸತ್ಯಹರಿಶ್ಚಂದ್ರವಲ್ಲ. ಆದರೆ, ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿ ತರಹ ಹೇಳಲ್ಲ. ಎಲ್ಲರನ್ನೂ ಒಗ್ಗೂಡಿ ತೆಗೆದುಕೊಂಡು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಕೈ ಅಭ್ಯರ್ಥಿಪರ ಪ್ರಚಾರ ಮಾಡುತ್ತಿದ್ದೇವೆ. ಕರಪತ್ರ ಮಾಡಿ ಸಂಕಲ್ಪಯಾತ್ರೆ ಮಾಡುತ್ತಿದ್ದೇವೆ. ೩ತಂಡರಚನೆ ಮಾಡಿ ೮ದಿನ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಜಿ.ಕುಮಾರನಾಯಕ ಪರ ತಾಂಡಾ, ದೊಡ್ಡಿಗೆ ತೆರಳಿಬೆಂಬಲ ಕೋರಿದ್ದೇವೆ.
ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬಲಾಯಿಸುವ ಹುನ್ನಾರ ನಡೆಯುತ್ತಿದ್ದು ಮುಂದೆ ಚುನಾವಣೆಯೇ ನಡೆಯದೆ ಸರ್ವಾಧಿಕಾರ ಆಡಳಿತ ಬರಲಿದೆ. ಚುನಾವಣೆ ಬಾಂಡ್ ಪಡೆದಿದ್ದು ಮೋದಿ, ಆದರೆ ಅದರ ವಿರುದ್ಧ ಧ್ವನಿಎತ್ತಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಜೈಲಿಗೆ ಹಾಕಲಾಗಿದೆ. ಇವಿಎಂ ಬಗ್ಗೆ ಹಲವು ಅನುಮಾನಗಳಿದ್ದರೂ ಗೊಂದನೆ ನಿವಾರಣೆಯಾಗಿಲ್ಲ.
ಹುಬ್ಬಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಖಂಡನೀಯ. ಆರೋಪಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅದೇರೀತಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಮಾಡಿದ ಸಂಸದ ಪ್ರಜ್ವಲ್ ರೇವಣ್ಣಗೂ ಕಠಿಣಶಿಕ್ಷೆ ವಿಧಿಸಬೇಕು. ಪ್ರಜ್ವಲ್‌ಗೆ ಬಿಜೆಪಿ ಸರ್ಕಾರ ರಾತ್ರೋರಾತ್ರಿ ಪಾಸ್‌ಪೋರ್ಟ್ ನೀಡಿ ವಿದೇಶಕ್ಕೆ ಹಾರುವಂತೆ ನೋಡಿಕೊಂಡಿದೆ ಎಂದು ದೂರಿದರು.
ಬಿಜೆಪಿ ಸೋಲಿಸುವ ಏಕೈಕ ಉದ್ದೇಶದಿಂದ ಕಾಂಗ್ರೆಸ್‌ಗೆ ಬೆಂಬಲಿಸಿದ್ದೇವೆ ಎಂದರು. ಮುಖಂಡರಾದ ಕೆ.ಎಚ್.ಅಂಜನ್‌ಮೂರ್ತಿ, ವೀರೇಶ, ಬಾಲ್‌ರಾಜ್, ಚನ್ನಾ ನಾಯಕ, ಕುಮಾರ, ಸುರೇಶ ಇದ್ದರು.
೧-ಡಿವಿಡಿ-೨