ಜೋಶಿ ಪರ ಅಮಿತ್ ಶಾ ಪ್ರಚಾರ
ಹುಬ್ಬಳ್ಳಿ,ಮೇ2: ‘ಆತ್ಮೀಯ ಮಿತ್ರ ಪ್ರಲ್ಹಾದ ಜೋಶಿಜಿ ಅವರನ್ನು ಮತ್ತೆ ದಿಲ್ಲಿಗೆ ಚುನಾಯಿಸಿ ಕಳಿಸಿ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ಹುಬ್ಬಳ್ಳಿ ನೆಹರು ಮೈದಾನದಲ್ಲಿ ಬಿಜೆಪಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಜೋಶಿ ಪರ ಮತಯಾಚಿಸಿ ಮಾತನಾಡಿ, ಇದು ನನ್ನ ವಿಶೇಷ ಮನವಿ ಎಂದು ಸಭಿಕರಲ್ಲಿ ಕೋರಿದರು.
ನೀವು 4ನೇ ಬಾರಿ ಭಾರೀ ಅಂತರದಲ್ಲಿ ಪ್ರಲ್ಹಾದ ಜೋಶಿ ಅವರನ್ನು ಆರಿಸಿ ಕಳಿಸಿದ್ದಕ್ಕೆ ಪ್ರತಿಯಾಗಿ ಸಂಸತ್ ನ ಪ್ರಭಾವಿ ಸಚಿವರನ್ನಾಗಿ ಮಾಡಿ ನಿಮಗೆ ಕೊಡುಗೆ ನೀಡಿದ್ದೇವೆ. ಈಗಲೂ ಅವರನ್ನು ಹಿಂದಿನಕ್ಕಿಂತ ಅತ್ಯಧಿಕ ಅಂತರದಿಂದ ಗೆಲ್ಲಿಸಿ ದೆಹಲಿಗೆ ಕಳಿಸಿ ಎಂದು ಅಮಿತ್ ಶಾ ಮನವಿ ಮಾಡಿದರು.
ಪ್ರಲ್ಹಾದ ಜೋಶಿ ಅವರು ಕೇಂದ್ರ ಸಂಸದೀಯ, ಕಲ್ಲಿದ್ದಲು ಸಚಿವರಾಗಿ ಕಾರ್ಯ ಒತ್ತಡದ ನಡುವೆಯೂ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಹತ್ವ ನೀಡಿದ್ದಾರೆ. ಕೆಲವೊಮ್ಮೆ ನನ್ನೊಂದಿಗೆ ವಾದಕ್ಕಿಳಿದು ಕ್ಷೇತ್ರದ ಕೆಲಸ ಕಾರ್ಯ ಪೂರೈಸಿದ್ದಾರೆ ಎಂದರು.
ಈಗ 5ನೇ ಬಾರಿ ಮತ್ತೆ ಪ್ರಲ್ಹಾದ ಜೋಶಿ ಅವರನ್ನು ಸಂಸತ್ತಿಗೆ ಕಳಿಸಿ ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಅದೇನೇ ಅಭಿವೃದ್ಧಿ ಕೆಲಸಗಳಿದ್ದರೂ ಸರಿ ನಾವು ಸಾಧಿಸಿ ತೋರುತ್ತೇವೆ ಎಂದು ಅಮಿತ್ ಶಾ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಎಂಎಲ್ ಸಿ ಪ್ರದೀಪ್ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.