ಕಾಂಗ್ರೆಸ್ಗೆ ಸೋಲಿನ ಭೀತಿ ಎದುರಾಗಿದೆ – ಗಾಯಿತ್ರಿ ಸಿದ್ಧೇಶ್ವರ್
ಸಂಜೆವಾಣಿ ವಾರ್ತೆ
ಹರಿಹರ.ಮೇ.೨ : ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿದ್ದು, ಡಾಕ್ಟರ್ ಬೇಕೋ, ಪಿಯುಸಿ ಬೇಕೋ ಅಂತ ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಅವರ ಮಾವ ಶಾಮನೂರು ಶಿವಶಂಕರಪ್ಪ ಅವರು ನನಗೆ ಮಾತಾಡುವುದಕ್ಕೆ ಬರುವುದಿಲ್ಲ. ಅಡುಗೆ ಮಾಡುವುದಕ್ಕೆ ಲಾಯಕ್ ಎಂದಿದ್ದರು. ಮನುಷ್ಯನಿಗೆ ವಿದ್ಯೆಯ ಜೊತೆ ವಿನಯ, ಸಂಸ್ಕಾರ, ಸಂಸ್ಕೃತಿ ತಿಳಿದಿರಬೇಕು. ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಮತ್ತು ಅವರ ಕುಟುಂಬಕ್ಕೆ ವಿನಯ, ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ. ಹಿರಿಯರಿಗೆ, ಮಹಿಳೆಯರಿಗೆ ಗೌರವ ಕೊಡುವುದು ಗೊತ್ತಿಲ್ಲ. ಸೋಲುತ್ತೇನೆ ಎಂಬ ಹತಾಶೆಯಿಂದ ಹೀಗೆ ಪ್ರಚಾರ ಮಾಡುತ್ತಿದ್ದಾರೆ. ಇಂತಹವರನ್ನು ಕ್ಷೇತ್ರದ ಜನ ರಾಜಕೀಯದಿಂದ ದೂರ ಇಡಬೇಕು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತೀಕ್ಷಣವಾಗಿ ವಾಗ್ದಾಳಿ ನಡೆಸಿದರು.ಹರಿಹರ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನವರದು ಬ್ರಿಟಿಷ್ ಸಂಸ್ಕೃತಿ, ಬ್ರಿಟಿಷರು ಹೇಗೆ ಭಾರತೀಯರನ್ನು ಒಡೆದು ಆಳ್ವಿಕೆ ಮಾಡಿದ್ದರೋ ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಕೂಡ ಉಳ್ಳವರು, ನಿರ್ಗತಿಕರು, ವಿದ್ಯಾವಂತರು, ಅವಿದ್ಯಾವಂತರು, ಹಿಂದುಗಳು, ಮುಸ್ಲಿಮರು ಎಂದು ಜಾತಿ ಜಾತಿಗಳ, ಧರ್ಮ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೇಸಿಗೆಯ ರಾಜಕಾರಣಕ್ಕೆ ಮತದಾರರು ಮೇ 7 ರಂದು ತಕ್ಕ ಉತ್ತರ ನೀಡಲಿದ್ದಾರೆ ಎಂದರು.ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಪಕ್ಷ. ಮುಸ್ಲಿಂ ವಿವಾಹಿತ ಮಹಿಳೆರಿಗೆ ತ್ರಿವಳಿ ತಲಾಖ್ ಒಂದು ರೀತಿ ಮರಣಶಾಸನವಾಗಿತ್ತು. ಅಂತಹ ತ್ರಿವಳಿ ತಲಾಖ್ ತೆಗೆದು ಮಹಿಳೆಯರ ಗೌರವ ಉಳಿಸುವ ಕೆಲಸ ಮಾಡಿದೆ. ಮಹಿಳಾ ಸಬಲೀಕರಣಕ್ಕೆ ಮೋದಿ ಜೀ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಬೇಟಿ ಪಚಾವೋ, ಭೇಟಿ ಪಡಾವೋ ಎಂದು ಹೆಣ್ಣು ಮಕ್ಕಳ ರಕ್ಷಣೆ, ವಿದ್ಯಾಭ್ಯಾಸಕ್ಕೆ ಒತ್ತು ನೀಡಿದೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನದಾಗಿ ಬರಬೇಕು ಎಂದು ರಾಜಕೀಯದಲ್ಲಿ ಶೇ.33 ರಷ್ಟು ಮೀಸಲಾತಿ ನೀಡಿದ್ದಾರೆ. ನಾನು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗೆದ್ದು ದೆಹಲಿಗೆ ಹೋಗಿ ಅಡುಗೆ ಮಾಡುವುದಕ್ಕೆ ಅಷ್ಟೇ ಅಲ್ಲ ಅಧಿಕಾರಕ್ಕೂ ಸೈ ಎಂದು, ಅಭಿವೃದ್ಧಿಗೂ ಸೈ ಎಂದು ಸಾಭೀತುಪಡಿಸುತ್ತೇನೆ. ಅದಕ್ಕೆಲ್ಲ ನೀವು ನನ್ನ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರುದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ದೇಶದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜೀ ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ನವರಿಗೆ ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಿಕೊಳ್ಳುವ ಧೈರ್ಯವಿಲ್ಲ. ಕಾಂಗ್ರೆಸ್ ನಾವಿಕನಿಲ್ಲ ಹಡಗು. ಅದೇ ನಮ್ಮ ಬಿಜೆಪಿಗೆ ನರೇಂದ್ರ ಮೋದಿ ಜೀ ಅವರೇ ನಾಯಕರು. ನಮ್ಮನ್ನೆಲ್ಲ ಸುರಕ್ಷಿತವಾಗಿ ನೋಡಿಕೊಳ್ಳುವ ಸೈನಿಕರೂ ಮೋದಿ ಜೀ ಅವರೇ.. ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಳ್ಳಲು ಆಗದೆ ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿ ಕೀಳು ರಾಜಕೀಯ ಮಾಡುತ್ತಿದ್ದಾರೆ. ಮೇ 7 ರಂದು ನಡೆಯಲಿರುವ ಮತದಾನ ವೇಳೆ ನೀವೆಲ್ಲರೂ ನನ್ನ ಕ್ರಮ ಸಂಖ್ಯೆ 1, ಕಮಲದ ಗುರುತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹಾಕಿಸುವ ಮೂಲಕ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
