ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಹೈಟೆಕ್ ಶಾಲೆಗಳಿಗೆ ಹೆಚ್ಚಿನ ಆದ್ಯತೆ: ಜಿ. ಬಿ. ವಿನಯ್ ಕುಮಾರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨: ಕಳೆದ 30ರಿಂದ 35 ವರ್ಷಗಳಿಂದ ಶಾಸಕರು, ಸಚಿವರು, ಸಂಸದರಾದವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ. ಬಡವರ ಮಕ್ಕಳಿಗೆ ಹೈಟೆಕ್ ಶಾಲೆಗಳ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಪೋಷಕರ ಕನಸು ನನಸಾಗಬೇಕಾದರೆ ಮೂಲಭೂತ ಸೌಲಭ್ಯಗಳುಳ್ಳ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಆಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. ಲೋಕಸಭೆಗೆ ನನ್ನನ್ನು ಕಳುಹಿಸಿಕೊಡಿ. ಇದನ್ನು ನಾನು ಮಾಡಿ ತೋರಿಸುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಭರವಸೆ ನೀಡಿದರು.ಹರಿಹರ ತಾಲೂಕಿನ ಬೇವಿನಹಳ್ಳಿ, ಬನ್ನಿಕೋಡು,  ಸಲನಗಹಳ್ಳಿ ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಇದೊಂದು ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದರು.ಬೇವಿನಹಳ್ಳಿಯಲ್ಲಿಯೂ ಭರ್ಜರಿ ರೋಡ್ ಶೋ ನಡೆಸಿದರು. ಜನರಿಂದ ಭಾರೀ ಸ್ಪಂದನೆ ದೊರೆಯಿತು. ವಿನಯ್ ಕುಮಾರ್ ಪರ ಘೋಷಣೆಗಳು ಮುಗಿಲು ಮುಟ್ಟಿದವು. ಈ ವೇಳೆ ಬೇವಿನಹಳ್ಳಿ ಗ್ರಾಮದ ಬಿ. ಎಂ. ನಾಗರಾಜ್, ರವಿ, ರೇವಣಸಿದ್ಧಪ್ಪ, ಗೌಡರ್ ಸಂತೋಷ್, ಸಿದ್ಧಪ್ಪ, ಬಿ. ಜಿ. ರೇವಣಸಿದ್ಧಪ್ಪ ಹಾಜರಿದ್ದರು.ಬನ್ನಿಕೋಡು ಗ್ರಾಮದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕೇವಲ ಭರವಸೆ ಕೊಟ್ಟು ಹೋಗುವವನಲ್ಲ. ಕೊಟ್ಟ ಭರವಸೆ ಈಡೇರಿಸುವವನು. ಹೆಚ್ಚಿನ ಮಹತ್ವ ಶಿಕ್ಷಣಕ್ಕೆ ನೀಡುತ್ತೇನೆ. ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಿ ಎಲ್ಲಾ ವರ್ಗದ ಬಡವರಿಗೂ ಉಚಿತವಾಗಿ ತರಬೇತಿ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ. ನಿಮ್ಮ ಮಕ್ಕಳು ಉನ್ನತ ಅಧಿಕಾರಿಗಳಾಗಬೇಕು. ನಿಮ್ಮ ಊರಿಗೆ ಒಳ್ಳೆಯ ಹೆಸರು ತರುವಂತಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.ಪದವಿ ಮುಗಿಸಿದ ಕೂಡಲೇ ಯುವಕ, ಯುವತಿಯರಿಗೆ ಕೆಲಸ ಸಿಗಬೇಕು. ಕೈಗಾರಿಕೆಗಳು, ಐಟಿ ಬಿಟಿ ಪಾರ್ಕ್ ಗಳು ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕೆಗಳು ಬಂದರೆ ಇದು ಸಾಧ್ಯವಾಗುತ್ತದೆ. ಇಷ್ಟು ವರ್ಷಗಳು ಉರುಳಿದರೂ ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನನಗಷ್ಟೇ ಅಲ್ಲ, ಕ್ಷೇತ್ರದ ಪ್ರತಿಯೊಬ್ಬರಿಗೂ ಕಾಡುತ್ತಿದೆ. ರಕ್ತ, ಬೆವರು ಹೀರಿ ಮತ ಪಡೆದಿದ್ದಾರೆ. ನಮಗೇನೂ ವಾಪಸ್ ಕೊಟ್ಟಿದ್ದಾರೆ. ಮೂರು ದಶಕಗಳಲ್ಲಿ ಶಾಲೆ ಪರಿಸ್ಥಿತಿ ಸುಧಾರಿಸಿದೆಯಾ? ಅಕ್ಕಪಕ್ಕದಲ್ಲಿ ನಗರ ಪ್ರದೇಶಗಳಲ್ಲಿ ಇರುವಂತೆ ಸುಸಜ್ಜಿತ ಕಾಲೇಜುಗಳು ಬಂದಿವೆಯಾ ಎಂಬ ಬಗ್ಗೆ ಯೋಚಿಸಿ ಹಕ್ಕು ಚಲಾಯಿಸಿ ಎಂದರು.ಕೆಲಸ ಮಾಡುವಂಥ ಒಳ್ಳೆಯ ವ್ಯಕ್ತಿ ಆಯ್ಕೆ ಮಾಡಿ. ಸಮಾಜಕ್ಕೆ ಏನಾದರೂ ನೀಡಬೇಕು, ಸೇವೆ ಮಾಡಬೇಕು ಎಂಬ ವ್ಯಕ್ತಿಯನ್ನು ಗೆಲ್ಲಿಸಿ. ಈ ಬಾರಿ ಮೂರು ಆಯ್ಕೆಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾದ ನನ್ನ ನಡುವೆತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಕ್ಷದ ತತ್ವ, ಸಿದ್ಧಾತ ಅಡ್ಡಬರುವ ರೀತಿಯಲ್ಲಿ ಮಾಡಿಕೊಳ್ಳಬೇಡಿ. ನಿಮ್ಮ ಸಂಕಷ್ಟಕ್ಕೆ, ಕಷ್ಟಕ್ಕೆ, ನೋವು ನಲಿವಿಗೆ ಸ್ಪಂದಿಸುವವರಿಗೆ ಮನ್ನಣೆ ನೀಡಿ. ಪಕ್ಷಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಊರಿನ ಅಭಿವೃದ್ಧಿ,
ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಮತದಾನ ಮಾಡಿ ಎಂದು ಹೇಳಿದರು.ಲೋಕಸಭೆ ಚುನಾವಣೆ ಅಂದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇತ್ತು. ಆದ್ರೆ, ನಾನು ಕ್ಷೇತ್ರದಲ್ಲಿ ಸಂಚರಿಸಲು ಶುರು ಮಾಡಿದ ಮೇಲೆ ಹೊಸ ಹುರುಪು, ಹೊಸ ಚೈತನ್ಯ ಬಂದಿದೆ. ಜನರ ಜೊತೆಗೆ ನಿರಂತರ ಸಂಪರ್ಕ, ಹಳ್ಳಿಗಳಿಗೆ ಹೋಗಿಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ ಇರುವವರು, ಸಮಾಜ ಸೇವೆ ಮಾಡುವವರು ಪಾರ್ಲಿಮೆಂಟ್ ಗೆ ಹೋಗಬೇಕು. ಅದೇ ರೀತಿಯಲ್ಲಿ ಬಡವರು, ಮಹಿಳೆಯರು, ರೈತರು ಸೇರಿದಂತೆ ಎಲ್ಲಾ ವರ್ಗದವರ ಸಂಕಷ್ಟಗಳನ್ನು ಅರಿತವರಿರಬೇಕು. ಬಡತನ ಕಂಡಿರಬೇಕು, ನೊಂದವರ ಧ್ವನಿಯಾಗುವಂತಿರಬೇಕು ಎಂದರು.