ಮತದಾನ ಭವಿಷ್ಯದ ಬದುಕಿಗೆ ವರದಾನ
ಪ್ರಜೆಗಳೇ,ಪ್ರಜೆಗಳಿಂದ,ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದ್ದು ಭವಿಷ್ಯದಲ್ಲಿ ಇದರ ಅಸ್ತಿತ್ವ ಉಳಿಯಬೇಕಾದರೆ ಚುನಾವಣೆಗಳು ಪರಿಣಾಮಕಾರಿಯಾಗಿ ಬೇಕಾಗುತ್ತವೆ.ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ಪವಿತ್ರವಾದ ಸ್ಥಾನವಿದೆ. Ballot paper is more powerful than bullet power ಎನ್ನುವ ಮಾತು ಅಕ್ಷರಶಃ ಸತ್ಯವಾದದ್ದು. ಆ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ತನ್ನ ಮೂಲಭೂತ ಕರ್ತವ್ಯಗಳಲ್ಲಿ ಒಂದಾದ  ಮತ ಚಲಾವಣೆಯನ್ನು ಕಡ್ಡಾಯವಾಗಿ  ಮಾಡಲೇಬೇಕಾಗಿದೆ.ನಾವುಗಳು ಮತ ಹಾಕದೇ ಆಡಳಿತ ವ್ಯವಸ್ಥೆಯ ವಿರುದ್ಧ ಮಾತನಾಡಲು,ಪ್ರಶ್ನೆ ಮಾಡಲು ನೈತಿಕತೆ ಇರುವುದಿಲ್ಲ. ಈ ನೈತಿಕತೆ ಬರಬೇಕಾದರೆ ನಾವೆಲ್ಲರೂ ಕಡ್ಡಾಯವಾಗಿ ಮತ ಚಲಾವಣೆಯನ್ನು ಮಾಡಬೇಕು.ಜನಪ್ರತಿನಿಧಿಗಳಿಂದ ಉತ್ತಮ ಆಡಳಿತ, ಪ್ರಾಮಾಣಿಕ ಕೆಲಸ ಕಾರ್ಯಗಳನ್ನು ನಿರೀಕ್ಷಿಸಿದರೆ ಸಾಲದು.ಉತ್ತಮ ವ್ಯಕ್ತಿಯನ್ನು ಆಯ್ಕೆಮಾಡುವ ಪವಿತ್ರವಾದ ಜವಾಬ್ದಾರಿಯನ್ನು ನಾವು ಪಾಲಿಸಲೇಬೇಕಾಗಿದೆ. ಇಂದಿಗೂ ಕೂಡ ಶೇಕಡಾ ನೂರರಷ್ಟು ಮತದಾನ ಆಗುತ್ತಿಲ್ಲ. ಚುನಾವಣಾ ಆಯೋಗವು ಜಿಲ್ಲಾಡಳಿತ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಕೂಡ ನಮ್ಮ ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನದ ಶೇಕಡಾ ಪ್ರಮಾಣವು 70 % ದಾಟದಿರುವುದು ವಿಪರ್ಯಾಸ. ಇದಕ್ಕೆಲ್ಲ ಕಾರಣ ಪ್ರಜ್ಞಾವಂತರಲ್ಲೇ ಸಿನಿಕತನ ಮತ್ತು ಉದಾಸೀನ ಮನೋಭಾವ ಮೂಡಿರುವುದು . ನಗರ ಪ್ರದೇಶಗಳಲ್ಲಿನ ವಿದ್ಯಾವಂತರೆನಿಸಿಕೊಂಡವರೇ ಚುನಾವಣೆಯ ದಿನಾಂಕದಂದು ಪ್ರವಾಸ ಏರ್ಪಡಿಸಿಕೊಂಡು ರಜೆಯ ಮಜವನ್ನು ಅನುಭವಿಸುತ್ತ ತಮ್ಮ ಗುರುತರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ದೊಡ್ಡ ಪ್ರಮಾದವೇ ಸರಿ. ಮತ್ತೆ ಕೆಲವರು ಹಲವು ಚುನಾವಣಾ ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸುತ್ತಾರೆ. ಇವು ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಇಂಥ ಕೆಟ್ಟ ವ್ಯವಸ್ಥೆಯಿಂದ ಹೊರ ಬಂದು ಮತದಾರರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಚಲಾಯಿಸಿದಾಗ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ.ಈಗಿನ ವ್ಯವಸ್ಥೆಯಲ್ಲಿ ಮತದಾನ ಮಾಡದೇ ಇರುವ ಒಂದು ವರ್ಗ ಹಾಗೂ ಆಮಿಷಕ್ಕೆ ಗುರಿಯಾಗುವ ಮತ್ತೊಂದು ವರ್ಗ. ಇದರಿಂದ ಚುನಾವಣೆ ಎಂಬುದು ಪ್ರಹಸನ ಆಗುತ್ತಿದೆ. ಮತದಾನ ಮಾಡದೇ ಮನೆಗಳಲ್ಲೇ ಕುಳಿತು ಸಮಾಜದಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ,ಮೂಲಭೂತ ಸೌಲಭ್ಯಗಳ ಕೊರತೆ ಎಂದೆಲ್ಲ ಟೀಕಿಸುವ ಬದಲು ಪ್ರಜ್ಞಾವಂತರಾಗಿ  ಮತ ಚಲಾವಣೆಯ ಮೂಲಕ  ಉತ್ತಮ ಜನಪ್ರತಿನಿಧಿಯನ್ನು  ಆಯ್ಕೆ ಮಾಡಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.ಆದ್ದರಿಂದ ನಾವೆಲ್ಲರೂ ಶೇಕಡ ನೂರರಷ್ಟು ಮತ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ವ್ಯವಸ್ಥೆಯಲ್ಲಿನ ಕೆಲ ಲೋಪ ದೋಷಗಳನ್ನು ಸರಿಪಡಿಸಬಹುದಾಗಿದೆ. ಆಗ ಮಾತ್ರ ನಾವುಗಳು ಚಲಾಯಿಸಲ್ಪಡುವ ಮತಗಳು ಭವಿಷ್ಯದ ಬದುಕಿಗೆ ವರದಾನವಾಗಲಿವೆ.