ಸಂಸದ ಪ್ರಜ್ವಲ್ ರೇವಣ್ಣನನ್ನು ಗಲ್ಲಿಗೇರಿಸಬೇಕು; ವಕೀಲ ಡಾ.ಎಂ.ಸಿ ನರಹರಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಮೇ.1: ಮಹಿಳೆಯರ ಮೇಲೆ ಅತ್ಯಾಚಾರದಂತಹ ಪೈಶಾಚಿಕ ಕೃತ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಗಲ್ಲಿಗೆ ಏರಿಸಬೇಕು ಎಂದು ವಕೀಲ ಡಾ. ಎಂ.ಸಿ.ನರಹರಿ ಒತ್ತಾಯಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣನಿಂದ ಅನೇಕರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆದಿದೆ. ಇದರಲ್ಲಿ ಅಪ್ರಾಪ್ತ ಬಾಲಕಿಯರು ಇದ್ದು ಕೂಡಲೇ ಪೋಕ್ಸೋ ಸುಮೊಟೋ ಕೇಸು ದಾಖಲು ಮಾಡಬೇಕು ಎಂದು ಆಗ್ರಹಿಸಿದರು.ಅಜ್ಜ ಪ್ರಧಾನಿ, ಅಪ್ಪ ಸಚಿವ, ಚಿಕ್ಕಪ್ಪ ಮುಖ್ಯಮಂತ್ರಿ, ಚಿಕ್ಕಮ್ಮ ಶಾಸಕಿ, ಅಮ್ಮ ಜಿಪಂ‌ ಸದಸ್ಯೆ, ತಮ್ಮ ಎಂ ಎಲ್ ಸಿ ಆಗಿದ್ದು, ಭಾರತ ಕಂಡ ವಿಕೃತಕಾಮಿ ಸಂಸದ ಎಂದು ಕಿಡಿಕಾರಿದ ಅವರು, ಅಂಬೇಡ್ಕರ್ ಬರೆದ ಸಂವಿಧಾನದ ಮಾನಹರಣವಾಗಿದೆ. ಸಂಸತ್ ನಲ್ಲಿ ಧ್ವನಿಯಾಗಬೇಕಾಗಿದ್ದವನೆ ಕಾಮುಕನಾಗಿದ್ದಾನೆ ಇತನನ್ನು ಶೀಘ್ರವೇ ಕಾನೂನಿನ ಶಿಕ್ಷೆಗೆ ಗುರಿಪಡಿಸಬೇಕು ಎಂದರು.ಸಂತ್ರಸ್ತೆ ಒಬ್ಬರು ತನ್ನ ಮಗಳ ಜೊತೆ ಕೂಡ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಬಳಸಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಇದೆ‌. ಹಾಗಾಗಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಹಿಳಾ ಆಯೋಗದ ಬಳಿಕ ಈಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಂದಿದ್ದು, ಒಂದು ವೇಳೆ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಆಯೋಗ ಪೋಕ್ಸೋ ಪ್ರಕರಣದಡಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.ಪ್ರಜ್ವಲ್ ರೇವಣ್ಣ ಮಾಡಿರುವ ಕೃತ್ಯದಿಂದ ಜೆಡಿ ಎಸ್ ತೆನೆಹೊತ್ತ ಮಹಿಳಾ ಗುರುತಿಗೆ ನಿಜಕ್ಕೂ ಅವಮಾನ ಆಗಿದೆ‌. ತೆನೆ ಹೊತ್ತ ಮಹಿಳೆ ಬದಲು ಮಾಡಬೇಕು ಎಂದು ದೇವೆಗೌಡರಿಗೆ ಆಗ್ರಹಿಸಿದರು.