ವಚನೆ ಪಾಲನೆ ನಮ್ಮ ಜವಾಬ್ದಾರಿ: ವೀರಣ್ಣ
ಗೌರಿಬಿದನೂರು: ಮೇ.೨- ೧೨ನೇ ಶತಮಾನದಲ್ಲಿ ಸಮಾಜದ ಸುಧಾರಣೆ ಮತ್ತು ಮೌಢ್ಯತೆಯ ನಿರ್ಮೂಲನೆಗಾಗಿ ಶ್ರಮಿಸಿದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಅವರು ನೀಡಿರಯವ ಸಂದೇಶಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಆರ್.ವೀರಣ್ಣ ತಿಳಿಸಿದರು.
ನಗರದ ಸಮೀಪದ ಕಲ್ಲೂಡಿ ಗ್ರಾಮದ ಹೊರವಲಯದಲ್ಲಿರುವ ಕಲ್ಲಂತರಾಯಗುಟ್ಟೆಯ ಶ್ರೀಕಲ್ಲಿನಾಥೇಶ್ವರ ದೇವಾಲಯದಲ್ಲಿ ಸೋಮವಾರ ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ’ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಜಯಂತಿ’ಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಅನಿಷ್ಟ ಪಿಡುಗುಗಳನ್ನು ತೊಡೆದು ಹಾಕುವ ಜತೆಗೆ ಜನರಲ್ಲಿ ವೈಚಾರಿಕಾ ಮನೋಭಾವ ಬೆಳೆಸುವ ಮೂಲಕ ನಾಗರೀಕ ಸಂಸ್ಕೃತಿಯನ್ನು ಕಲಿಸುವ ಪ್ರಯತ್ನ ಪ್ರಮುಖವಾಗಿತ್ತು. ಈ ನಿಟ್ಟಿನಲ್ಲಿ ಈ ಇಬ್ಬರೂ ಮಹನೀಯರು ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ಸಾಕಷ್ಟು ನಿಂಧನೆಗಳು ಮತ್ತು ಸವಾಲುಗಳ ನಡುವೆ ಸಮಾಜದ ಒಳಿತಿಗಾಗಿ ಹೋರಾಟ ನಡೆಸಿ ಸಮಸಮಾಜ ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದಾರೆ. ಅಂತಹ ಮಹಾನ್ ನಾಯಕರ ಸ್ಮರಣೆ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸ್ಮೃತಿ ಕ್ರಿಯೇಷನ್ಸ್ ವ್ಯವಸ್ಥಾಪಕರಾದ ಎ.ಎಸ್.ಜಗನ್ನಾಥ್ ಮಾತನಾಡಿ, ಶತಮಾನಗಳ ಹಿಂದೆಯೇ ಲೋಕ ಕಲ್ಯಾಣ ಮತ್ತು ಸಮಾಜ ಸುಧಾರಣೆಗಾಗಿ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಹೋರಾಟ ಮಾಡಿದ ಮಹಾನ್ ಸಂತರ ಜಯಂತಿ ಆಚರಣೆಗೆ ಮುಂದಾಗಿರುವ ಕದಳಿ ಮಹಿಳಾ ವೇದಿಕೆಯ ಕಾರ್ಯ ಶ್ಲಾಘನೀಯ. ಆಧುನಿಕ ಜಗತ್ತಿನಲ್ಲಿ ಒತ್ತಡದ ಕಾರ್ಯಗಳ ನಡುವೆಯೂ ಕೂಡ ಸಮಾಜ ಸುಧಾರಕರು ಮತ್ತು ಅವರ ಸಾಧನೆಗಳನ್ನು ಸ್ಮರಿಸುವ ಪ್ರಯತ್ನ ಅದ್ಭುತವಾಗಿದೆ ಎಂದು ಹೇಳಿದರು.
ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ.ಎ.ಬಿ.ಶೈಲಜಾ ಸಪ್ತಗಿರಿ ಮಾತನಾಡಿ, ೧೨ ನೇ ಶತಮಾನದಲ್ಲಿ ಸಮಾಜದಲ್ಲಿನ ಅವೈಜ್ಞಾನಿಕ ಮತ್ತು ಅನಾಗರೀಕತೆಯ ವಿರುದ್ಧ ಹೋರಾಟ ಮಾಡುವ ಮೂಲಕ ಜನತೆಯಲ್ಲಿ ದಾರ್ಶನಿಕ ಬೆಳಕು ಮೂಡಿಸಿದ ಕೀರ್ತಿ ಸಂತರಿಗೆ ಸಲ್ಲುತ್ತದೆ. ಇಂತಹ ಮಹನೀಯರ ಜಯಂತಿಯನ್ನು ಕದಳಿ ಮಹಿಳಾ ವೇದಿಕೆಯ ವತಿಯಿಂದ ಇಂತಹ ಪುಣ್ಯಕ್ಷೇತ್ರ ಪರಮೇಶ್ವರನ ಸನ್ನಿಧಾನದಲ್ಲಿ ಮಾಡುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಅದೃಷ್ಟವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಶ್ರೀಕಲ್ಲಿನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆರ್.ವೀರಣ್ಣ ಮತ್ತು ಎ.ಎಸ್.ಜಗನ್ನಾಥ್ ರವರನ್ನು ಕದಳಿ ಮಹಿಳಾ ವೇದಿಕೆಯ ವತಿಯಿಂದ ಆತ್ಮೀಯವಾಗಿ ಅಭಿನಂಧಿಸಿದರು.
ತಾಲ್ಲೂಕು ಅಧ್ಯಕ್ಷೆ ಪಿ.ವಿ.ಸುವರ್ಣಮ್ಮ, ಜಿಲ್ಲಾ ಕಾರ್ಯದರ್ಶಿ ಚೈತ್ರ ಮಂಜುನಾಥ್, ಗುಡಿಬಂಡೆ ತಾಲ್ಲೂಕು ಅಧ್ಯಕ್ಷೆ ಚಂದ್ರಕಳಾ ಜಯರಾಂ, ಜಿಲ್ಲಾ ಖಜಾಂಚಿ ಮಂಜುಳಾ, ಪದಾದೀಕಾರಿಗಳಾದ ಭಾರತಿ ಗೌರೀಶ್, ಲಕ್ಷ್ಮೀ, ರಾಜೇಶ್ವರಿ, ನಳಿನ, ನೇತ್ರ, ಶಾರದಾ, ಲಲಿತಾ, ಸುಲ್ತಾನ, ಮಂಜುಳಾ, ಅನಿತಾ, ಶ್ರೀರಕ್ಷಾ, ರಾಧಿಕಾ ನಾಗರಾಜ್, ಶೃತಿ ಸೇರಿದಂತೆ ಇತರರು ಭಾಗವಹಿಸಿದ್ದರು.