ಮುದ್ರಣಕಾರರ ದಿನಾಚರಣೆ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.02:- ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಫಲವಾಗಿ ಕೃಷಿ ಉದ್ಯಮದ ಮೇಲೆ ದೊಡ್ಡ ಪೆಟ್ಟು, ಶ್ರಮ, ಗಳಿಕೆ, ಸಂಪನ್ಮೂಲ ಕಸಿಯುವ ಕೆಲಸವಾಗುತ್ತಿದೆ ಎಂದು ರೈತ ನಾಯಕಿ ಸುದನಂನದಾ ಜಯರಾಂ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ನೆನಪಿನಲ್ಲಿ ನಡೆದ ಮುದ್ರಣಕಾರರ ದಿನಾಚರಣೆ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಬೇವರು, ಶ್ರಮವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ದೊಡ್ಡ ಅಪಾಯ ಎಂದು ಹೇಳಿದರು.
ಭಾರತದಲ್ಲಿ ಶೇ. 80ರಷ್ಟು ಭಾಗ ಕಾರ್ಮಿಕರೇ ಆಗಿದ್ದಾರೆ. ಶೇ. 20ರಷ್ಟು ಮಾತ್ರ ಶ್ರಮ ಎಂದರೆ ಏನೆಂದು ಗೊತ್ತಿಲ್ಲದವರಿರಬಹುದು. ರಾಷ್ಟ್ರದಲ್ಲಿ ಕೃಷಿಯನ್ನೇ ಅವಲಂಭನೆ ಮಾಡಿರುವವರೇ ಹೆಚ್ಚು. 90ರ ದಶಕದಲ್ಲಿ ಇಂತಹ ಉದ್ಯಮಕ್ಕೆ ದೊಡ್ಡ ಪೆಟ್ಟು ಕೆಲಸ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿಕರು, ಶ್ರಮಿಕರು, ಮಹಿಳೆಯರು, ಕಾರ್ಮಿಕರು, ದುಡಿಯುವ ಎಲ್ಲ ವರ್ಗದ ಜನತೆ ಈ ದೇಶವನ್ನು ಕಟ್ಟಿದ್ದೇವೆ. ಉಳಿಸಿದ್ದೇವೆ. ಉಸಿರನ್ನೂ ಕೊಟ್ಟಿದ್ದೇವೆ. ಈ ದೇಶದ ಎಲ್ಲ ಗೌರವ, ಸಂಪನ್ಮೂಲ ಶ್ರಮಿಕರಿಗೆ, ಕಾರ್ಮಿಕರಿಗೆ ಬೆವರನ್ನು ಸುರಿಸಿ ದುಡಿಯುವವರಿಗೆ ಸಲ್ಲಬೇಕು. ಆದರೆ ಇದು ಆಗುತ್ತಿಲ್ಲ. ಶೇ. 20ರಷ್ಟು ಜನ ಇಡೀ ದೇಶವನ್ನು ಬಲಿಕೊಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಜೋಹಾನ್ಸ್ ಪುಟಿನ್ ಬರ್ಗ್‍ನಂತಹ ವ್ಯಕ್ತಿ ತನ್ನ 54ರ ವಯೋಮಾನದಲ್ಲಿ ಮುದ್ರಣ ಮಾಧ್ಯಮವನ್ನು ಸಂಶೋಧಿಸಿದರು. ಇಂದು ಈ ಕ್ಷೇತ್ರದಲ್ಲಿ ಬಳಷ್ಟು ತಾಂತ್ರಿಕತೆ ಬಂದು ವೇಗ ಪಡೆದುಕೊಂಡಿರಬಹುದು. ಆದರೆ ಮೊದಲು ಅದನ್ನು ಪರಿಚಯಿಸಿದ ವ್ಯಕ್ತಿಗೆ ಗೌರವ ಕೊಡುವುದು ಎಲ್ಲರ ಧರ್ಮವಾಗಿದೆ ಎಂದರು.
ಈ ಕ್ಷೇತ್ರದಲ್ಲಿ ದುಡಿಮೆ, ಗಳಿಕೆ ಅಷ್ಟೇ ಅಲ್ಲದೆ, ಬಹಳ ಎಚ್ಚರಿಕೆಯಿಂದಲೂ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಪತ್ರಿಕಾ ಮಾಧ್ಯಮದಲ್ಲಿಯೂ ನಾವು ಬಹಳಷ್ಟು ಶ್ರಮವನ್ನು ಕಾಣುತ್ತಿದ್ದೇವೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲದ್ದಕ್ಕೂ ಒಂದೊಂದು ದಿನಾಚರಣೆಯನ್ನಾಗಿ ಘೋಷಿಸಿ ಆಚರಿಸುತ್ತಿರುವುದ ಸರಿಯಲ್ಲ. ಇಂತಹ ಆಚರಣೆಯಿಂದ ಮಹತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಎಲ್ಲದ್ದಕ್ಕೂ ಇತಿ, ಮಿತಿ ಇರಬೇಕು. ಇಲ್ಲದಿದ್ದರೆ ಸ್ವಾತಂತ್ರ್ಯ ಹೋಗಿ ಸ್ವೇಚ್ಚಾಚಾರ ಹೆಚ್ಚಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಚ್.ಎಸ್. ಮುದ್ದೇಗೌಡ ಮಾತನಾಡಿ, ಮನುಷ್ಯ ಜೀವಂತವಿರುವಾಗ ಏನಾದರೊಂದು ಸಾಧನೆ ಮಾಡಬೇಕು. ಇಲ್ಲದಿದ್ದರೆ ಅವನ ಹೆಸರು ಅಳಿಸಿಹೋಗುತ್ತದೆ. ಆದರೆ ಮುದ್ರಣ ಮಾಧ್ಯಮವೊಂದನ್ನು ಜಗತ್ತಿಗೆ ಪರಿಚಯಿಸಿದ ಜೋಹಾನ್ಸ್ ಗುಟೆನ್ ಬರ್ಗ್ ಅವರನ್ನು ಜಗತ್ತು ಎಲ್ಲಿಯವರೆ ಇರುತ್ತದೋ ಅಲ್ಲಿಯವರೆವಿಗೂ ನೆನಪಿಸಿಕೊಳ್ಳುವಂತಹ ಕಾರ?ಯ ಮಾಡಿದ್ದಾರೆ ಎಂದು ಬಣ್ಣಿಸಿದರು.
ಇಂದು ವಿಶ್ವದ ತುಂಬಾ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕಾರ್ಖಾನೆಗಳಲ್ಲಿ ನಾಮಫಲಕಗಳನ್ನು ಹಾಕಿಕೊಂಡು ಕೆಲಸ ಮಾಡುವರಷ್ಟೇ ಕಾರ್ಮಿಕರಲ್ಲ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೆ. ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪೌರ ಕಾರ್ಮಿಕರು ಕಾರಿನಲ್ಲಿ ಬಂದು ಅವರಿಗೆ ವಹಿಸಿದ ಕೆಲಸವನ್ನು ನಿಗಧಿತ ಅವಧಿಯೊಳಗೆ ಮುಗಿಸಿ ವಾಪಸ್ಸಾಗುತ್ತಾರೆ. ಆದರೆ ನಮ್ಮಲ್ಲಿ ಇನ್ನೂ ಅಂತಹ ಸ್ಥಿತಿ ಕಂಡಿಲ್ಲ. ದುಡಿಮೆಗೆ ಹಣ ಕೊಡುವವನೇ ಮಾಲೀಕ. ಕಾರ್ಮಿಕರ ಕಾರಣದಿಂದಾಗಿ ಮಾಲೀಕನಾದವನು ಕಾರ್ಮಿಕನಾಗಿಯೂ ಕೆಲಸ ಮಾಡುತ್ತಾನೆ ಎಂದು ವಿವರಿಸಿದರು.
ಇಂತಹಕ್ಷೇತ್ರದಲ್ಲಿ ಇನ್ನೊಬ್ಬರಿಂದ ದೌರ್ಜನ್ಯ ಉಂಟಾಗುತ್ತೋ, ದುಡಿಮೆಗೆ ಕುತ್ತು ಅಥವಾ ದುಡಿಮೆಗೆ ಸರಿಯಾದ ಸಂಬಳ ಸಿಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಬಂಡೇಳುವುದು ಅವಶ್ಯ. ಅಮೆರಿಕಾದ ಚಿಕಾಗೋ ನಗರದಲ್ಲಿ 130 ವರ್ಷದ ಹಿಂದೆ ಕಾರ್ಮಿಕರು ಪ್ರಭುತ್ವದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿದ್ದರು. ಅದು ದೊಡ್ಡ ಮಟ್ಟದ ಹೋರಾಟವಾಗಿತ್ತು. ನಂತರದ ದಿನಗಳಲ್ಲಿ ಬಹಳಷ್ಟು ಹೋರಾಟಗಳನ್ನು ನೋಡಿದ್ದೇವೆ. ಈ ರೀತಿ ತನ್ನ ಬಂಡಾಯವನ್ನು ಪ್ರದರ್ಶನ ಮಾಡಬೇಕಾದ ಅನಿವಾರಯತೆಯೂ ಎಂದು ಹೇಳಿದರು.
ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಜೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್‍ಕುಮಾರ್, ಮುದ್ರಣಕಾರರ ಸಂಘದ ರಾಜ್ಯ ಸಂಚಾಲಕ ಎಂ.ಎಸ್. ಸತೀಶ್, ಸಂಘದ ಗೌರವಾಧ್ಯಕ್ಷ ಎಂ.ಎಸ್. ಶಿವಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಹಿರಿಯ ಮುದ್ರಣ ಮಾಲೀಕರಾದ ಕೆ. ನಾಗರಾಜು, ರಾಜಪ್ಪ, ನಾರಾಯಣಸ್ವಾಮಿ ಎಂ.ಆರ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.