ಶ್ರಮಿಕ ವರ್ಗಗಳ ಅಭಿವೃದ್ದಿಯೇ ದೇಶದ ಪ್ರಗತಿ: ಶಿವಣ್ಣ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.02- ಶ್ರಮಿಕ ವರ್ಗ ಆರೋಗ್ಯವಾಗಿದ್ದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯವಿದೆ ಎಂದು ನಗರಸಭಾ ಮಾಜಿ ಸದಸ್ಯ ಶಿವಣ್ಣ ತಿಳಿಸಿದರು.
ಅವರು ಕಾರ್ಮಿಕರ ದಿನವಾದ ಮೇ ದಿನದಂದು ಚಾಮರಾಜನಗರ ಜಿಲ್ಲಾ ದಿನಸಿ ಮತ್ತು ಜವಳಿ ಅಂಗಡಿಗಳ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಚೆನ್ನಶೆಟ್ಟಿ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ನೋಟ್ ಬುಕ್ ಹಾಗೂ ಪೆನ್ ವಿತರಿಸಿದ ಶಿವಣ್ಣ ಬಳಿಕ ಮಾತನಾಡಿ, ವಿಶ್ವವೇ ಮೇ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ದುಡಿಯುವ ಕೈಗಳಿಗೆ ಒಂದು ದಿನ ವಿಶ್ರಾಂತಿ ನೀಡಬೇಕು. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಅವರ ಹಕ್ಕುಗಳ ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಮಿಕರು ದುಡಿಯುವ ಜೊತೆಗೆ ತಮ್ಮ ಆರೋಗ್ಯವನ್ನು ನೋಡಿಕೊಳ್ಳಬೇಕು. ಕುಟುಂಬ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ, ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಸಂಘಟಿತ ಕಾರ್ಮಿಕರಿಗೆ ಸಿಗುವ ಸವಲತ್ತುಗಳÀು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಶಿವಣ್ಣ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚೆನ್ನಶೆಟ್ಟಿ, ಇತರರು ಇದ್ದರು.