ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ: ರಾಜು ಆಲಗೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.2:ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷದ ಪ್ರಣಾಳಿಕೆ ಜೊತೆ ಜೊತೆಯಲ್ಲಿಯೇ ಜಿಲ್ಲೆ ಮೇಲಿನ ಅತೀವ ಕಾಳಜಿಯಿಂದ ನಾನೇ ಸ್ವತ: 10 ಅಂಶಗಳ ಅಭಿವೃದ್ಧಿ ಕೈಗೊಂಡು ಜಿಲ್ಲೆಯಲ್ಲಿ ಅಭಿವೃದ್ಧಿ ಕ್ರಾಂತಿಗೆ ನಾಂದಿ ಹಾಡುತ್ತೇನೆ ಎಂದು ವಿಜಯಪುರ ಲೋಕಸಭೆ ಎಸ್.ಸಿ ಮೀಸಲು ಕ್ಷೇತ್ರದ ಕಾಂಗ್ತೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದಿನ ಸಂಸದರು ಯಾವುದೇ ಉದ್ದೇಶ ಇಟ್ಟುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿಲ್ಲ. ಆದರೆ ನಾನು ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿವ ಒತ್ತು ನೀಡಲು 10 ಅಂಶಗಳನ್ನು ಇಟ್ಟುಕೊಂಡಿದ್ದೇನೆ. ದಶಕಗಳಿಂದಲೂ ಆಲಮಟ್ಟಿ ಅಣೆಕಟ್ಟು ಎತ್ತರ ಹಾಗೂ ನೀರಿನ ಸದ್ಭಳಕೆಗೆ ಸಂಬಂಧಿಸಿದಂತೆ ಬ್ರಿಜೇಶ್‍ಕುಮಾರ ಕೃಷ್ಣಾ ನ್ಯಾಯಾಧಿಕರಣ ತೀರ್ಪು ಅನುಷ್ಠಾನ ಜೊತೆಗೆ ಯುಕೆಪಿಯನ್ನು ರಾಷ್ಟ್ರೀಯ ಯೋಜನೆ ಮಾಡಲು ಒತ್ತು ನೀಡುತ್ತೇನೆ ಎಂದರು.
ರೈಲ್ವೆ ಸಂಚಾರ ಕ್ರಮಬದ್ದ, ದೆಹಲಿಗೆ ನೇರ ವಿಮಾನ ಸಂಪರ್ಕ, ಹೆದ್ದಾರಿ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಕೃಷಿಯ ವಿವಿಧ ತಳಿ ಅಭಿವೃದ್ಧಿ ಕೇಂದ್ರ, ಐಐಟಿ, ಸ್ಮಾರಕಗಳ ಅಭಿವೃದ್ಧಿ, ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ವಿಜಯಪುರ ಗುರುತಿಸುವುದು, ಕ್ರೀಡೆ, ಸೈಕ್ಲಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಿಜಯಪುರ ಜಿಲ್ಲೆಯಲ್ಲಿ ಕೇಂದ್ರ ಕ್ರೀಡಾ ಇಲಾಖೆಯಿಂದ ಕ್ರೀಡಾ ಕೇಂದ್ರ ಸ್ಥಾಪನೆ
ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಕೇಂದ್ರದ ಮೇಲೆ ಪರಿಣಾಮಕಾರಿಯಾಗಿ ಒತ್ತಡ ಹಾಕಿ ನಮ್ಮ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ, ಸಿಂದಗಿ ಹಾಗೂ ಇಂಡಿ ನವಾಬರ ಆಳ್ವಿಕೆಗೆ ಒಳಾಪಟ್ಟಿದ್ದವು. ಅವು 371 ಜೆ ಗೆ ಸೇರಿಸಲು ಹಾಲಿ ಸಂಸದರು ಕಿಂಚಿತ್ತೂ ಶ್ರಮಿಸಿಲ್ಲ. ಆದರೆ ನಾನು ಈ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಭರವಸೆ ನೀಡಿದರು.