ಮೋದಿ ಆಡಳಿತದಲ್ಲಿ ಸಬ್ ಕಾ ಸತ್ಯಾನಾಶ್:ಮಲ್ಲಿಕಾರ್ಜುನ ಖರ್ಗೆ
ವಾಡಿ,ಮೇ.1: ದೇಶದ ಯುವಕರು, ರೈತರು ಹಾಗೂ ಬಡವರು ಸಂಕಷ್ಟದಲ್ಲಿದ್ದಾರೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಆದರೂ ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಿದ್ದಾರೆ. ಇದು ಸಬ್ ಕಾ ಸಾಥ್ ಸಬ್ ಕಾ ಸತ್ಯಾನಾಶ್ ಆಗಿದೆ ಎಂದು ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ವಾಡಿ ಪಟ್ಟಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಯುವಕರಿಗೆ ಉದ್ಯೋಗ ಒದಗಿಸಲು ಸರ್ಕಾರ ವಿಫಲವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಈಡೇರಿಲ್ಲ. ದಿನಬಳಕೆ ವಸ್ತುಗಳು ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಗನಕ್ಕೇರಿದೆ. ರೈತರು ಬಳಸುವ ರಸಗೊಬ್ಬರ ಬೆಲೆ ಏರುತ್ತಲೇ ಇದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕಿದ್ದ ಮೋದಿ ಬರೀ ಸುಳ್ಳು ಹೇಳಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಎರಡು ಸಲ ಬಿಜೆಪಿಗೆ ಹಾಗೂ ಮೋದಿಗೆ ಓಟು ಹಾಕಿ ತಪ್ಪು ಮಾಡಿದ್ದೀರಿ. ಈಗ ಮತ್ತೆ ಅಂತಹ ತಪ್ಪು ಮಾಡಿದರೆ ನೀವು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಎಚ್ಚರಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಬಲಿದಾನ ಮಾಡಿದೆ. ಸ್ವಾತಂತ್ರ್ಯ ನಂತರ ಪ್ರಜಾತಂತ್ರವನ್ನು ಪರಿಚಯಿಸಿದೆ. ಮೋದಿ ಹುಟ್ಟುವ ಮೊದಲೇ ಅಭಿವೃದ್ದಿ ಕಾರ್ಯಗಳು ನಡೆದಿವೆ. ಆದರೂ ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ. ಮೋದಿ ಅವರೇ ಈ ದೇಶದ ಸ್ವಾತಂತ್ರ್ಯಕ್ಕಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಬಲಿದಾನ ಮಾಡಿದ್ದಾರಾ? ರಾಮ್ ನಾಮ್ ಸತ್ಯ ಹೈ ಅಂದಿದ್ದಾರಾ? ಎಂದು ಪ್ರಶ್ನಿಸಿದರು.
ದೇಶದ 140 ಕೋಟಿ ಜನರಿಗೆ ಅನ್ವಯವಾಗುವಂತಹ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ, ಆರ್‍ಎಸ್‍ಎಸ್ ನವರು ಹೊರಟಿದ್ದಾರೆ. ಈ ಬಗ್ಗೆ ಬಿಜೆಪಿಯ ಅನಂತಕುಮಾರ ಹೆಗಡೆ ಹಾಗೂ ಉತ್ತರಪ್ರದೇಶದ ಸಂಸದರು ಹೇಳಿಕೆ ನೀಡಿದ್ದಾರೆ. ಆದರೆ, ಮೋದಿ ಸಂವಿಧಾನ ಬದಲಿಸುವುದಿಲ್ಲ ಎನ್ನುತ್ತಾರೆ.ಜನರ ಅಭಿಪ್ರಾಯ ಏನಿರುತ್ತದೆ ಎಂದು ಪರೀಕ್ಷಿಸಲು ಅವರು ಹಾಗೆ ಮಾಡುತ್ತಾರೆ. ಜನರು ಪ್ರತಿರೋಧ ಮಾಡಿದರೆ ಉಲ್ಟಾ ಹೊಡೆಯುತ್ತಾರೆ. ದೇಶದಲ್ಲಿ ಒಮ್ಮೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹೋದರೆ ನಿಮಗೆ ಏನು ಸಿಗುವುದಿಲ್ಲ. ಅದಕ್ಕೆ ನೀವು ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು.
ಮೋದಿ ಬರೀ ಸುಳ್ಳು ಹೇಳುತ್ತಾರೆ. ಹಾಗಾಗಿ, ಅವರನ್ನು ಸುಳ್ಳಿನ ಸರದಾರ ಎಂದು ಹೆಸರಿಟ್ಟಿದ್ದೇನೆ. ಪ್ರತಿಯೊಬ್ಬರಿಗೆ 15 ಲಕ್ಷ ಹಣ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಯಾವ ಮಾತುಗಳನ್ನು ಈಡೇರಿಸಿಲ್ಲ. ಆದರೂ ಅಚ್ಚೇ ದಿನ್ ಲಾಯೇಂಗೆ ಎಂದು ಹೇಳುತ್ತಾರೆ. ಆದರೆ, ಇವು ಸಬ್ ಸೆ ಬುರಾ ದಿನ್. ಮೋದಿ ನಿನ್ನ ಅಚ್ಚೇ ದಿನ್ ನೀನೆ ಇಟ್ಟುಕೊಳ್ಳಪ್ಪ, ಮೊದಲಿನ ದಿನ ಕೊಟ್ಟುಬಿಡು ಎಂದು ವ್ಯಂಗ್ಯವಾಡಿದರು.
ಬಡವರು ಸಾಲ ಮಾಡಿದ್ದರೆ ಅವರ ಆಸ್ತಿ ಹರಾಜು ಹಾಕುತ್ತಾರೆ. ಆದರೆ ಶ್ರೀಮಂತರು ಲಕ್ಷಾಂತರ ಕೋಟಿ ಸಾಲ ಮಾಡಿ ಓಡಿ ಹೋಗಿದ್ದಾರೆ. ಅವರಿಗೆ ಏನು ಮಾಡಕ್ಕಾಗಿಲ್ಲ. ದೇಶದ ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎಂದಿದ್ದ ಮೋದಿ ಬಂಡವಾಳಶಾಯಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ.
ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದರೆ ಆಶಾ ಅಂಗನವಾಡಿ ಕಾರ್ಯಕರ್ತರ ಸಂಬಳ ದ್ವಿಗುಣ ಗೊಳಿಸುತ್ತೇವೆ. ಗೃಹಲಕ್ಷ್ಮೀ ಯೋಜನೆಯಂತೆ ಮಹಾಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮಹಿಳೆಗೆ ವಾರ್ಷಿಕ ಒಂದು ಲಕ್ಷ ಕೊಡುತ್ತೇವೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅನ್ನ ಭಾಗ್ಯ ಯೋಜನೆಯಡಿಯಲ್ಲಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ನೀಡಲಾಗಿದೆ. ಯುವನಿಧಿಯಲ್ಲಿ ಪದವಿ ಹಾಗೂ ಡಿಪೆÇ್ಲೀಮಾ ಆದವರಿಗೆ ರೂ 1500 ಹಾಗೂ ರೂ 3000 ನೀಡುತ್ತಿದ್ದೇವೆ ಇದು ನಮ್ಮ ಸರ್ಕಾರದ ಬದ್ದತೆ. ನಾವು ಬಸವಣ್ಣನವರ ಆಶಯದಂತೆ ನುಡಿದಂತೆ ನಡೆದಿದ್ದೇವೆ. ಆದರೆ, ಮೋದಿ ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಾರೆ. ಮೋದಿ ಅವರೇ ಸುಳ್ಳು ಹೇಳುವುದೇ ನಿಮ್ಮ ಗ್ಯಾರಂಟಿಯಾಗಿದೆ ಎಂದು ಹರಿಹಾಯ್ದರು.
ನಾರಿ ನ್ಯಾಯ್ , ಯುವ ನ್ಯಾಯ್ , ಶ್ರಮಿಕ್ ನ್ಯಾಯ, ಭಾಗಿದಾರಿ ನ್ಯಾಯ್ ಹಾಗೂ ಕಿಸಾನ್ ನ್ಯಾಯ್ ಯೋಜನೆಗಳ ಅಡಿಯಲ್ಲಿ ಎಲ್ಲ ವರ್ಗದವರಿಗೆ ಅನುಕೂಲ ಮಾಡಿಕೊಡಲಿದ್ದೇವೆ. ಇದು ನಮ್ಮ ಸರ್ಕಾರದ ಗ್ಯಾರಂಟಿಗಳಾಗಿವೆ. ಆದರೆ, ಮೋದಿ ಕಾಂಗ್ರೆಸ್ ನವರು ನಿಮ್ಮ ಸಂಪತ್ತನ್ನು ಹೆಚ್ಚು ಮಕ್ಕಳು ಇರುವವರಿಗೆ ಹಂಚುತ್ತಾರೆ ಎನ್ನುತ್ತಾರೆ. ಬಡವರಿಗೆ ಹೆಚ್ಚು ಮಕ್ಕಳು ಇರುತ್ತಾರೆ. ನಿಮಗೆ ಮಕ್ಕಳು ಇಲ್ಲ ಎಂದರೆ ನಾವು ಜವಾಬ್ದಾರರಾ? ತಾಳಿಯನ್ನು ಕಿತ್ತು ಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಈ ದೇಶದಲ್ಲಿ ತಾಳಿ ಕಿತ್ತುಕೊಂಡವನು ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಇದೂವರೆಗೆ ನಡೆದ ಚುನಾವಣೆಯಲ್ಲಿ ಮುಂದೆ ಇದ್ದೇವೆ. ಇನ್ನೂ ಐದು ಹಂತದ ಚುನಾವಣೆಗಳು ಬಾಕಿ ಇವೆ. ನಿಶ್ಷಿತವಾಗಿ ನಾವು ಗೆಲ್ಲುತ್ತೇವೆ ಎಂದು ಖರ್ಗೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ದೇಶದ ಆಸ್ತಿಗಳನ್ನು ಮಾರುತ್ತಿದ್ದಾರೆ. ಅವರು ಮಾರುವ ಆಸ್ತಿಗಳನ್ನು ಅಂಬಾನಿ ಹಾಗೂ ಅದಾನಿ ಕೊಂಡುಕೊಳ್ಳುತ್ತಿದ್ದಾರೆ. ದೇಶವನ್ನು ಮಾರುವ ಮೋದಿಯನ್ನು ನೀವು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿ, ಸಭಿಕರೊಂದಿಗೆ ಮೋದಿ ಹಠಾವ್ ದೇಶ್ ಬಜಾವ್ ಎಂದು ಘೋಷಣೆ ಕೂಗಿದರು.
ವಾಡಿ ಪಟ್ಟಣದ ಬಗ್ಗೆ ನನಗೆ ವಿಶೇಷವಾದ ಪ್ರೀತಿ ಇದೆ. ಕಾರಣ ಇಲ್ಲಿಗೆ ಡಾ ಬಾಬಾಸಾಹೇಬರು ಬಂದು ಹೋಗಿದ್ದಾರೆ.ಇಂತಹ ಪುಣ್ಯಭೂಮಿಯಲ್ಲಿ ನಿಂತು ಮಾತನಾಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗಲಿದ್ದಾರೆ. ಹಾಗಾಗಿ ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಬೂಬ್ ಸಾಹೇಬ್, ಭೀಮಣ್ಣ ಸಾಲಿ, ಶಿವಾನಂದ್ ಪಾಟೀಲ್, ರಮೇಶ್ ಮರಗೋಳ, ಮುಕ್ತಾರ್ ಪಟೇಲ್, ನಾಗರೆಡ್ಡಿ ಪಾಟೀಲ್ ಕರದಾಳ, ಟೋಪಣ್ಣ, ರೇವು ನಾಯಕ ಬೆಳಮಗಿ ಸೇರಿದಂತೆ ಹಲವರಿದ್ದರು.