ಕೃಷಿ ಕೋರ್ಸುಗಳ ತರಬೇತಿ ಉದ್ಘಾಟನೆ
ಕಲಬುರಗಿ,ಮೇ.1: ಕೃಷಿ ಕ್ಷೇತ್ರ ಮತ್ತೆ ಹಿಂದಿನ ಗತಕಾಲಕ್ಕೆ ಮರಳುವ ನಿಟ್ಟಿನಲ್ಲಿ ಕೃಷಿ ಪದವೀಧರ ಪಾತ್ರವೇ ಪ್ರಮುಖವಾಗಿದೆಯಲ್ಲದೇ ಕೃಷಿ ಪದವೀಧರನಾದರೆ ಹತ್ತಾರು ಹುದ್ದೆಗಳ ಅವಕಾಶವಿದೆ ಎಂದು ಹಿರಿಯ ಕೃಷಿ ವಿಜ್ಞಾನಿ ಡಾ. ರಾಜು ತೆಗ್ಗೆಳ್ಳಿ ಹೇಳಿದರು.ನಗರದ ಸಂಗಮೇಶ್ವರ ಕಾಲೋನಿಯ ಪಂಚಮುಖಿ ಹನುಮಾನ ಮಂದಿರ ಹತ್ತಿರದ ಡಾ. ಬುಜುರ್ಕೆ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಕೃಷಿ ಸಂಬಂಧಿತ ಕೋರ್ಸುಗಳ ತರಬೇತಿ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಯಶಸ್ವಿ ರೈತನಾದರೆ ತನ್ನ ಉದ್ಯೋಗದ ಜತೆಗೆ ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸಬಹುದು. ಅದಲ್ಲದೇ ಪ್ರಮುಖವಾಗಿ ಕೃಷಿ ಅಧಿಕಾರಿ ಜತೆ ಕೃಷಿ ಉಪಕರಣಗಳ ಉತ್ಪಾದನೆ ಕಂಪನಿ ಹಾಗೂ ಕೃಷಿ ವಿಜ್ಞಾನಿಯಾಗಬಹುದು. ಅಷ್ಟೇ ಏಕೆ ಎಲ್ಲ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ ಎಂದು ವಿವರಣೆ ನೀಡಿದರು.
ಬಿಎಸ್ಸಿ ಕೃಷಿ ಸೇರಿ ಇತರ ಕೃಷಿ ಸಂಬಂಧಿತ ಕೋರ್ಸುಗಳ ಪ್ರವೇಶಾತಿ ಪರೀಕ್ಷೆಯನ್ನು ಎದುರಿಸುವ ಬಗೆಗೆ ವಿವರಣೆ ನೀಡಿದ ಡಾ. ರಾಜು ತೆಗ್ಗೆಳ್ಳಿ ಅವರು, ಎಲ್ಲ ಕೃಷಿ ಉತ್ಪನ್ನಗಳ ಮಾಹಿತಿ ಹೊಂದಿರಬೇಕು. ಕಣ್ಣೆದುರೇ ಇದ್ದರೂ ಹೆಸರು ಹೇಳಲು ಬರೋದಿಲ್ಲ. ಹೀಗಾಗಿ ಒಂದು ಸಲ ನೋಡಿ ಹತ್ತು ಸಲ ಬರೆಯುವ ಮೂಲಕ ನೆನಪನ್ನು ಹೆಚ್ಚಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿ, ಕೃಷಿ ಕ್ಷೇತ್ರ ಮತ್ತೆ ಮುಂಚೂಣಿ ಗೆ ಬರುವಂತಾಗಲು ಅಂದರೆ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎಂಬುದನ್ನು ಮುಂದಿನ ದಿನಗಳಲ್ಲಿ ಕೃಷಿ ಪದವೀಧರರಾಗಿ ಕಾರ್ಯರೂಪಿಸುವಂತೆ ಕರೆ ನೀಡಿದರು.
ಡಾ.ಬುಜುರ್ಕೆ ಅಕಾಡೆಮಿಯ ಡಾ. ಶಿವರಾಜ ಬುಜುರ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುತ್ಯಾನ ಬಬಲಾದ ಮಠದ ಪೂಜ್ಯ ಕೃಷಿ ಪಂಡಿತ ಗುರುಪಾದಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ಪಾಟೀಲ್ ಅಷ್ಟಗಿ, ಚೆನ್ನಮಲ್ಲಿಕಾರ್ಜುನ ಹಿರೇಮಠ, ಮಂದಾರ ಹುಕ್ಕೇರಿ, ಸುನೀಲ್ ಪಾಟೀಲ್ ಮತ್ತು ಸುಷ್ಮಾ ಬುಜರಕೆ ಇತರರು ಹಾಜರಿದ್ದರು.