ಜ್ಞಾನ ಬಲವೇ ಎಲ್ಲ ಸಾಮಥ್ರ್ಯಗಳಿಗೆ ಸಂಜೀವಿನಿ : ಹಾರಕೂಡ ಶ್ರೀ
ಬಸವಕಲ್ಯಾಣ:ಮೇ.1: ಜ್ಞಾನ ಜಗತ್ತನ್ನು ಆಳುತ್ತದೆ, ಜ್ಞಾನಕ್ಕೆ ಸಮನಾದುದು ಇನ್ನೊಂದಿಲ್ಲ, ಜ್ಞಾನ ಬಲವೇ ಎಲ್ಲ ಸಾಮಥ್ರ್ಯಗಳಿಗೆ ಸಂಜೀವಿನಿ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸೈದಾಪುರ ಗ್ರಾಮದಲ್ಲಿ ಶ್ರೀ ಹನುಮಾನ ಮಂದಿರ ಕಳಸಾರೋಹಣ ಅಂಗವಾಗಿ ಆಯೋಜಿಸಿದ ಅಖಂಡ ಹರಿನಾಮ, ಜ್ಞಾನೇಶ್ವರಿ ಪಾರಾಯಣ ಸಪ್ತಾಹದ ಉದ್ಘಾಟನಾ ಸಮಾರಂಭದ ಪಾವನ ಸನ್ನಿಧಾನ ವಹಿಸಿದ ಶ್ರೀಗಳು ಈ ದೇಶದ ಪರಂಪರೆಯಲ್ಲಿ ಕಿರು ವಯಸ್ಸಿನಲ್ಲಿಯೇ ಅಗಾಧ ಆಧ್ಯಾತ್ಮ ಸಾಧನೆ ಮಾಡಿದ ಸಂತ ಜ್ಞಾನೇಶ್ವರ ಮಹಾರಾಜರು, ವ್ಯಕ್ತಿ ಜ್ಞಾನದಿಂದ ದೊಡ್ಡವನಾಗುತ್ತಾನೆ ಹೊರತು ವಯಸ್ಸಿನಿಂದಲ್ಲ ಎಂಬುದನ್ನು ಸಾಕ್ಷಿ ಕರಿಸಿದವರು.
ಮನುಷ್ಯ ಸಂಸಾರಿಕ ಕಕ್ಷೆಯಿಂದ ದೈವಿಕಕ್ಷೆಗೆ ಪಯಣಿಸಬೇಕಾದರೆ ಸದ್ಗುರುವಿನ ಆಶೀರ್ವಾದದ ಬಲ ಅತ್ಯಗತ್ಯ.
ಅಂತರ್ಮುಖಿ ಯಾನದಿಂದ ದೈವಿಸನ್ನಿಧಾನ ಸಾಧ್ಯವಾಗುತ್ತದೆ. ಸಂತ ಜ್ಞಾನೇಶ್ವರಿ ಪಾರಾಯಣ ಸೈದಾಪುರ ಜನತೆಯಲ್ಲಿ ಅಧ್ಯಾತ್ಮದ ಹೊಸ ಬೆಳಕು ಮೂಡಿಸಲಿ ಸರ್ವರೂ ಸಹ ಬಾಳ್ವೆಯಿಂದ ಬದುಕುವಂತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂಬಾರಾಯ ಉಗಾಜಿ ಕೋಹಿನೂರ ಮಾತನಾಡಿ ತ್ಯಾಗ, ಸೇವೆ, ದಾಸೋಹ, ಸಮಾಜಮುಖಿ ಕಾರ್ಯಾ ಚಟುವಟಿಕೆಗಳೇ ಹಾರಕೂಡ ಶ್ರೀಮಠದ ವಿಶೇಷ ಹಾಗೂ ವೈಶಿಷ್ಟ್ಯತೆ ಎಂದು ನುಡಿದರು.
ಶ್ರೀ ವಿಷ್ಣು ಮಹರಾಜ ಔರಾದ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಅಮರನಾಥ ಮಹಾರಾಜ ಬಾಮನಿಕರ, ಸಂಜಯ್ ಮಹಾರಾಜ ಗುರಾಕಾರ, ಪ್ರಸಾದ ಮಹಾರಾಜ ಕೌಂಟಾ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಅಂಬರಾಯ ಬೊಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು.
ದಗಡು ಬಿರಾದಾರ ವಂದಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ ಹಾರಕೂಡದ ಪೂಜ್ಯರನ್ನು ದೀಪಾಲಂಕೃತ ಸಾರೋಟಿನಲ್ಲಿ ಗ್ರಾಮದ ಹೊರವಲಯದಿಂದ ಶ್ರೀ ಹನುಮಾನ ಮಂದಿರದವರೆಗೆ ಅದ್ದೂರಿ ಮೆರವಣಿಗೆ ಮೂಲಕ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು.
ಕೊನೆಯದಾಗಿ ಸಮಸ್ತ ಸೈದಾಪುರ ಗ್ರಾಮದ ಭಕ್ತರ ವತಿಯಿಂದ ಹಾರಕೂಡ ಶ್ರೀಗಳ 636ನೇ ತುಲಾಭಾರಕಾರ್ಯಕ್ರಮ ಜರುಗಿತು.