ದೇಶದ ವಿಕಾಸ ಮಾಡದ ಮೋದಿ ವಿಕಸಿತ ಭಾರತ ಎಂದರೆನು ಪ್ರಯೋಜನ ?: ಹರಿಪ್ರಸಾದ
ಬೀದರ್:ಮೇ.1: ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ಮಾತನಾಡದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೃತಕಾಲದ ಬಗ್ಗೆ ಮಾತನಾಡುತ್ತಾರೆ. 2047ರ ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಾರೆ. ದೇಶದ ಯುವಕರಿಗೆ ಉದ್ಯೋಗ ನೀಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೇಸ್ ಹಿರಿಯ ಮುಖಂಡರಾದ ಬಿ.ಕೆ.ಹರಿಪ್ರಸಾದ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಜರುಗಿದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರೈತರಿಗೆ, ಹಿಸ್ಸೆದಾರರಿಗೆ, ಯುವಕರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಸೇರಿದಂತೆ ಒಟ್ಟ ಐದು ನ್ಯಾಯ ಪತ್ರಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಹೊರಡಿಸಿದ್ದೇವೆ. ನಮ್ಮ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 30 ಲಕ್ಷ ಉದ್ಯೋಗ ಭರ್ತಿ ಮಾಡುವ ಭರವಸೆ. ಎಂಎಸ್‍ಪಿ ಜಾರಿಗೆ ತರುವುದು, ಮೀಸಲಾತಿ ಹೆಚ್ಚಿಸುವುದು ಸೇರಿದಂತೆ ಹಲವು ಜನಹಿತ ಕಾರ್ಯಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದೇವೆ. ಎಂದರು.