ಹೋಲಿಕೆ ಸಂಸ್ಕøತಿಯಿಂದ ಮಾನಸಿಕ ಅಶಾಂತಿ
ಕಲಬುರಗಿ:ಸೆ.21: ಶಾಂತಿ ಎಂಬದು ಕೇವಲ ಎರಡಕ್ಷರದ ಶಬ್ದವಲ್ಲ. ಅದರಲ್ಲಿ ಬಹುದೊಡ್ಡ ಶಕ್ತಿಯಿದೆ. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿಂದು ಮಾನವ ತನಗೆ ಲಭ್ಯವಿರುವುದನ್ನು ಅನುಭವಿಸಿ ನೆಮ್ಮದಿ ಹಾಗೂ ಶಾಂತಿಯಿಂದ ಜೀವಿಸುವದನ್ನು ಬಿಟ್ಟು, ಮತ್ತೊಬ್ಬರ ಜೊತೆಗೆ ಹೋಲಿಕೆ ಮಾಡುತ್ತಿರುವದರಿಂದ ಕೊರತೆಯೆನಿಸಿ, ಮಾನಸಿಕ ಅಶಾಂತಿಯನ್ನು ಎದುರಿಸುತ್ತಿದ್ದಾನೆ ಎಂದು ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.
ನಗರದ ಮಕ್ತಂಪುರ ಗುರುಬಸವ ಮಠದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಸಂಜೆ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಆಶಿರ್ವಚನ ನೀಡುತ್ತಿದ್ದರು.
ಇಂದು ಇಡೀ ಜಗತ್ತೇ ‘ಶಾಂತಿ’ಯ ಮಂತ್ರ ಪಠಿಸುತ್ತಿದೆ. ದುರಾಸೆ, ಭಯೋತ್ಪಾದನೆ, ವೈಷಮ್ಯ, ಒತ್ತಡದ ಬದುಕು, ಅನೀತಿ, ಅನ್ಯಾಯ, ಅಜ್ಞಾನ, ಹೊಂದಾಣಿಕೆ ಇಲ್ಲದಿರುವುದು, ಭ್ರಷ್ಟಾಚಾರ, ಮಾನವೀಯ ಮೌಲ್ಯಗಳು ನಶಿಸುತ್ತಿರುವುದು ಸೇರಿದಂತೆ ಇಂತಹ ಅನೇಕ ಕಾರಣಗಳಿಂದ ಶಾಂತಿಯೆಂಬುದು ಇಲ್ಲವಾಗಿದೆ. ಇರುವುದರಲ್ಲಿಯೇ ತೃಪ್ತಿಯಿಂದಿರುವುದು, ಸತ್ಯ ಶುದ್ಧವಾದ ಕಾಯಕ ಮಾಡುವುದು, ಸತ್ಸಂಗ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು, ಬಸವಾದಿ ಶರಣರ ತತ್ವಗಳು ಪಾಲಿಸುವುದರಿಂದ ಶಾಂತಿಯುತ ಜೀವನ ನಮ್ಮದಾಗಿಸಿಕೊಳ್ಳಬಹುದಾಗಿದೆ ಎಂದು ಅನೇಕ ದೃಷ್ಟಾಂತಗಳೊಂದಿಗೆ ಮನೋಗ್ಞವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಚಿಂತಕ ಅಮರನಾಥ ಶಿವಮೂರ್ತಿ, ಮಲ್ಲಿಕಾರ್ಜುನ ಕಾಖಂಡಕಿ ಹಾಗೂ ಮಠದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.