ದೇವಲೋಕದವರಿಗೂ ಬಸವಣ್ಣನವರೇ ದೇವರು: ಸಾಕ್ಷಿ ಎಸ್. ಸತ್ಯಂಪೇಟೆ
ಕಲಬುರಗಿ:ಸೆ.21:ದೇವಲೋಕದವರಿಗೂ ಸಹ ಬಸವಣ್ಣನವರೇ ದೇವರು, ಅಕ್ಕಮಹಾದೇವಿಯು ಎಲ್ಲ ಆಸೆ, ರೋಷಗಳನ್ನು ತೊರೆದು ಚನ್ನ ಮಲ್ಲಿಕಾರ್ಜುನನಿಗೆ ತನ್ನ ಮನವ ಮಾರಿದಳು ಎಂದು ಶರಣ ಚಿಂತಕಿ ಶ್ರೀಮತಿ ಸಾಕ್ಷಿ ಎಸ್. ಸತ್ಯಂಪೇಟೆ ಅವರು ಹೇಳಿದರು.
ನಗರದ ಸೇಡಂ ರಸ್ತೆಯಲ್ಲಿರುವ ಜಯನಗರದಲ್ಲಿನ ಅನುಭವ ಮಂಟಪದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಎರಡು ದಿನಗಳ ಮಹಾದೇವಿಯಕ್ಕಗಳ ಸಮ್ಮೇಳನ-14ರ ಆರಂಭದ ದಿನದಂದು ವಚನ ನಿರ್ವಚನ ಗೋಷ್ಠಿ 1ರಲ್ಲಿ ಬಸವಣ್ಣ ನಿಮ್ಮ ಅಂಗದಾಚಾರವ ಕಂಡು ಅಕ್ಕನ ವಚನ ಕುರಿತು ಮಾತನಾಡಿದ ಅವರು, ಬಸವಣ್ಣನವರು ತಾವೊಬ್ಬರೇ ದಾರ್ಶನಕರಾಗಲಿಲ್ಲ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಆ ಎತ್ತರದ ಸ್ಥಾನಕ್ಕೆ ಬೆಳೆಸಿದರು ಎಂದರು.
ಬದುಕಿನಲ್ಲಿ ಅದು ಬೇಕು, ಇದು ಬೇಕು, ಅದನ್ನು ತನ್ನದಾಗಿಸಿಕೊಳ್ಳಬೇಕು ಎಂಬ ವಯಸ್ಸಿನಲ್ಲಿಯೇ ಅದು ತನಗೆ ಬೇಡ, ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂಬ ಉನ್ನತ ಸ್ಥಿತಿಗೆ ತಲುಪಿ, ಹಸಿವೆ ನೀನು ನಿಲ್ಲು, ತೃಷೆಯೇ ನೀನು ನಿಲ್ಲು, ಕಾಮವೇ ನೀನು ನಿಲ್ಲು ಎಂದು ಹೊರಟ ಅಕ್ಕಮಹಾದೇವಿ ಆಸೆ ತೊರೆದು, ರೋಷ ಬಿಟ್ಟು ಚನ್ನಮಲ್ಲಿಕಾರ್ಜುನನಿಗೆ ತನ್ನ ತನುವ ಮಾರಿದಳು ಎಂದು ಅವರು ಹೇಳಿದರು.
ಚನ್ನಮಲ್ಲಿಕಾರ್ಜುನನೆಂಬ ತನ್ನ ಮನದ ನಲ್ಲನನ್ನು ಹುಡುಕುವ ದಾರಿಯಲ್ಲಿ ಬಸವನೆಂಬ ಬಳ್ಳಿಯನ್ನು ಕಾಲಿಗೆ ತಾಗಿಸಿಕೊಂಡು ಶರಣರ ಅನುಭವ ಮಂಟಪದಲ್ಲಿ ಮಾಗಿ ಉರಿಯುಂಡ ಕರ್ಪುರವಾಗಿ ಬೆಳಗಿದವಳು ಎಂದು ಅವರು ತಿಳಿಸಿದರು.
ಹನ್ನೆರಡನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತು ಕೊಟಂತಿರುವ, ಪ್ರಮಾಣ ಮಾಡಿದಂತಿರುವ ವಚನಗಳನ್ನು ನಿರ್ವಚನ ಮಾಡುವುದು ಕುರುಡನೊಬ್ಬ ಆನೆಯನ್ನು ವರ್ಣಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ಕತೃತ್ವ ಶಕ್ತಿ ಏನು? ಎಂಥದು? ಎಂಬುದನ್ನು ಅರಿಯುವುದು ಬಹಳ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಶ್ರೀಮತಿ ಸುಮಂಗಲಾ ಬಾಳಿ ಅವರು ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ ವಚನ ಕುರಿತು, ಶ್ರೀಮತಿ ಛಾಯಾ ಪಟ್ಟಣಶೆಟ್ಟಿ ಅವರು ಅಂಗದಲ್ಲಿ ಆಚಾರವ ತೋರಿದ ವಚನ ಕುರಿತು ನಿರ್ವಚನ ಮಾಡಿದರು.