ಮುಂಜಾಗ್ರತಾ ಕ್ರಮಗಳಿಂದ ಮರೆವಿನ ಕಾಯಿಲೆ ತಡೆಯಲು ಸಾಧ್ಯ
ಕಲಬುರಗಿ:ಸೆ.21: ವಯಸ್ಸಾದಂತೆ ನೆನಪಿನ ಶಕ್ತಿ ಕಳೆದುಕೊಂಡು ಮರೆವು ಆವರಿಸುವುದು ಸಹಜ. ವಾಯುವಿಹಾರ, ಯೋಗ, ಧ್ಯಾನ, ಪ್ರಾರ್ಥನೆ, ಸೂಕ್ತ ಆಹಾರ ಮತ್ತು ವಿಶ್ರಾಂತಿ ಪದ್ಧತಿ, ಸಕ್ಕರೆ ಸೇವನೆ ಮಾಡದಿರುವುದು, ಮೆದುಳಿನ ಆರೋಗ್ಯ ರಕ್ಷಣೆ, ಒಂಟಿತನದಿಂದ ದೂರವಿರುವುದು, ಕುಟುಂಬ ಹಾಗೂ ಸಮಾಜದ ಸಕಾರಾತ್ಮಕ ಪ್ರಭಾವ ಅಂತಹ ಮುಂತಾದ ಮುಂಜಾಗ್ರತಾ ಕ್ರಮಗಳ ಮೂಲಕ ಮರೆವು ಖಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ‘ವಿಶ್ವ ಮರೆವು ಕಾಯಿಲೆ ದಿನಾಚರಣೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮರೆವು ಕಾಯಿಲೆಯವರು ಬಹುತೇಕವಾಗಿ ಯಾವುದೇ ವಿಷಯಗಳು, ವಸ್ತುಗಳನ್ನು ಮರೆತು ಬಿಡುತ್ತಾರೆ. ಅರಳು-ಮರಳಾಗಿ ವರ್ತಿಸುವುದು, ಜ್ಞಾಪಕ ಶಕ್ತಿ ಕುಂದುವುದು, ಮೆದುಳಿನ ಜೀವಕೋಶಗಳ ನಾಶ, ತಾರ್ಕಿಕ ಶಕ್ತಿ ನಾಶದಂತಹ ಲಕ್ಷಣಗಳು ಮರೆವು ರೋಗದ ಲಕ್ಷಣಗಳಾಗಿವೆ. ರೋಗಿಗಳನ್ನು ಕೀಳಾಗಿ ಕಾಣುವುದು ಬೇಡ. ಅವರ ಜೊತೆ ಆಪ್ತವಾಗಿ ವರ್ತಿಸಬೇಕು. ತಜ್ಞರ ಪ್ರಕಾರ ನೂರರಲ್ಲಿ ಇಬ್ಬರಿಗೆ ಕಾಡುವ ಕಾಯಿಲೆ ಇದಾಗಿದ್ದು, ಆರಂಭದಲ್ಲಿ ಇದರ ಲಕ್ಷಣಗಳನ್ನು ಗುರ್ತಿಸಿ, ಸೂಕ್ತ ಜೀವನಶೈಲಿಯ ಬದಲಾವಣೆಯ ಮೂಲಕ ಮರೆವು ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ಶ್ರೀದೇವಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರಿದ್ದರು.