ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಿ:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ
ಬೀದರ್:ಮೇ.1: ಮೇ. 7 ರಂದು ನಡೆಯುವ ಮತದಾನ ದಿನದಂದು ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿರುವಂತೆ ಚುನಾವಣೆಗೆ ನಿಯೋಜಿತ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.ಅವರು ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಎ.ಆರ್.ಓ. ತಹಶಿಲ್ದಾರ. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು. ಮಧ್ಯಾಹ್ನ ಬಿಸಿ ಊಟ ಆದಿಕಾರಿಗಳು ಹಾಗೂ ಪಿಡಿಓ ಮತ್ತು ಗ್ರಾಮ ಸೇವಕರಿಗೆ ಕರೆದ ಸಭೆಯಲ್ಲಿ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.ಮತಗಟ್ಟೆಗಳಲ್ಲಿ ಟೇಬಲ, ಕುರ್ಚಿ, ಕರೆಂಟ ಹಾಗೂ ಶೌಚಾಲಯಗಳ ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು ಮತ್ತು ಪ್ರತಿ ಮತಗಟ್ಟೆಗಳಲ್ಲಿ ಒಂದು ವ್ಹೀಲ್ ಚೇರ್ ವ್ಯವಸ್ಥೆ ಮಾಡಬೇಕು. ವಯಸ್ಸಾದವರು ಬಂದಾಗ ಅವರು ಅದರಲ್ಲಿ ಕುಳಿತು ಹೋಗಿ ಮತಹಾಕಲು ಅನುಕೂಲವಾಗುತ್ತದೆ. ಬಿಸಿಲು ಹೆಚ್ಚಾಗಿ ಇರುವುದರಿಂದ ಜನರು ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ತೊಂದರೆಯಾಗದಂತೆ ಅವರಿಗೆ ಮತಗಟ್ಟೆ ಪಕ್ಕದಲ್ಲಿ ಒಂದು ವೇಟಿಂಗ್ ಹಾಲ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.ಪ್ರತಿ ವಿಧಾನಸಭಾ ಕ್ಷೇತ್ರಗಳು 5 ಸಖಿ ಮತಗಟ್ಟೆ. ಒಂದು ಯುವ ಮತಗಟ್ಟೆ ಹಾಗೂ ಒಂದು ವಿಶೇಷ ಚೇತನರ ಮತಗಟ್ಟೆಗಳಿದ್ದು ಇವುಗಳನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಬೇಕು, ವಿಶೇಷ ಮತಗಟ್ಟೆ ಎಂದರೆ ವಿಶೇಷ ರೀತಿಯಲ್ಲಿ ಕಾಣಬೇಕು ಇದರ ಹೊರತಾಗಿ ಬೀದರ ಲೋಕಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಮತಗಟ್ಟೆಗಳ ಮುಂಭಾಗದಲ್ಲಿ ರಂಗೋಲಿ ಹಾಕಿ ಅವುಗಳಿಗೆ ತಳಿರು ತೋರಣ ಕಟ್ಟಿ ಅಲಂಕರಿಸಬೇಕು. ವಿಶೇಷ ಮತಗಟ್ಟೆಗಳನ್ನು ಹೊರತುಪಡಿಸಿ ಇತರೆ ಮತಗಟ್ಟೆಗಳನ್ನು ಒಳ್ಳೆಯ ರೀತಿಯಲ್ಲಿ ಅಲಂಕಾರ ಮಾಡಿದ ಮತಗಟ್ಟೆಗಳಿಗೆ ಜಿಲ್ಲಾ ಸ್ವೀಫ್ ಸಮಿತಿ ವತಿಯಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಟ ಮತ್ತು ಉಪಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು, ಯಾವುದೇ ಮತಗಟ್ಟೆಗಳಿಂದ ನಮಗೆ ಅಸ್ತವ್ಯಸ್ಥವಾಗಿದೆ ಎಂದು ಯಾವುದೇ ದೂರು ಬರದಂತೆ ಎಚ್ಚರಿಕೆಯಿಂದ ತಮಗೆ ವಹಿಸಿದ ಕೆಲಸವನ್ನು ನಿರ್ವಹಿಸಬೇಕೆಂದು ಹೇಳಿದರು. ಮತಗಟ್ಟೆಗಳಲ್ಲಿ ಮತದಾನವಾದ ಪ್ರತಿ ಎರಡು ತಾಸಿನ ಮಾಹಿತಿಯನ್ನು ಬಿ.ಎಲ್.ಓ ಗಳಿಗೆ ನೀಡಬೇಕು. ಮತದಾನ ಮಾಡಲು ಬರುವವರಿಗೆ ಸ್ವಾಗತಿಸಲು ಎನ್.ಎಸ್.ಎಸ್. ಎನ್.ಸಿ.ಸಿ. ಹಾಗೂ ಸ್ಕೌಟ್ ಮತ್ತು ಗೈಡ್ ಮಕ್ಕಳನ್ನು ನಗರ ಪ್ರದೇಶಗಳ ಮತಗಟ್ಟೆಗಳಲ್ಲಿ ಅವರ ಸೇವೆಯನ್ನು ಪಡೆಯಿರಿ ಎಂದು ಹೇಳಿದರು.ವಿಶೇಷ ಮತಗಟ್ಟೆಗಳಲ್ಲಿ ಬಣ್ಣ ಹಚ್ಚಬೇಕು. ಬಲೂನ್ ಹಾಗೂ ತಳಿರು ತೋರಣಗಳಿಂದ ಸಿಂಗಾರ ಮಾಡಬೇಕು. ಪೇಟಿಂಗ್ ಬೇಕಾದರೂ ಮಾಡಿ ಹಾಗೂ ಮತಗಟ್ಟೆ ಎದುರು ಚಿತ್ರಗಳನ್ನು ಬಿಡಿಸಿದರೆ ಅದು ಸ್ವೀಫ್ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಥವಾ ಮತದಾನ ಜಾಗೃತಿ ಕುರಿತು ಸಂದೇಶ ನೀಡುವ ಚಿತ್ರಗಳಾಗಿರಬೇಕು. ಬೀದರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಮತದಾನ ನಡೆಯುವಂತೆ ಚುನಾವಣೆ ನಿಯೋಜಿತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ನೋಡಿಕೊಳ್ಳಬೇಕೆಂದು ಹೇಳಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಫ್ ಸಮಿತಿ ಅಧ್ಯಕ್ಷರಾದ ಡಾ.ಗಿರೀಶ್ ಬದೋಲೆ ಅವರು ಮಾತನಾಡಿ ಶೇ.50 ಪ್ರತಿಶತಕ್ಕಿಂತ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಗಳಲ್ಲಿ ಇನ್ನು 5-6 ದಿನ ಕಾಲಾವಕಾಶ ಇರುವುದರಿಂದ ಹೆಚ್ಚಿನ ಸ್ವೀಫ್ ಕಾರ್ಯಕ್ರಮಗಳನ್ನು ಮಾಡಿ. ಈ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಾದರೆ ಇಡೀ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಾಗುತ್ತದೆ. ಒಂದೇ ಕಡೆ ಎರಡು ಮೂರು ಮತಗಟ್ಟೆಗಳು ಇರುವಲ್ಲಿ ಒಬ್ಬ ಭೂತ ಓಟರ ಅಸಿಸ್ಟೆಂಟಗಳನ್ನು ನಿಯೋಜನೆ ಮಾಡಿ ಇದರಿಂದ ಮತದಾನ ಮಾಡಲು ಬರುವ ಜನರಿಗೆ ಯಾವ ಮತಗಟ್ಟೆಯಲ್ಲಿ ಅವರು ಮತ ಚಲಾಯಿಸಬೇಕು ಎಂಬ ಮಾಹಿತಿ ಪಡೆಯಲು ಅವರಿಗೆ ಅನುಕೂಲವಾಗುತ್ತದೆ. ಬಿಸಿಲು ಹೆಚ್ಚಾಗಿ ಇರುವುದರಿಂದ ಮತದಾನ ಸಮಯದಲ್ಲಿ ಜನರಿಗೆ ಏನಾದರು ಆದರೆ ಅವರಿಗೆ ತಕ್ಷಣ ಸ್ಪಂದಿಸಲು ವೈದ್ಯರು ತಮ್ಮ- ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ಹೇಳಿದರು.ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಶಿಲ್ದಾರ ಅಣ್ಣಾರಾವ್ ಪಾಟೀಲ, ಎನ್.ಐ.ಸಿ ಅಧಿಕಾರಿ ಶ್ರೀನಿವಾಸ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಾದ ಸಲೀಂ ಪಾಶಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ, ಎ.ಆರ್.ಓ. ತಹಶಿಲ್ದಾರ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಓ. ಗ್ರಾಮ ಸೇವಕರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.