ತಾಂತ್ರಿಕ ಎಡವಟ್ಟು, ಹೆಚ್ಚು ಅಂಕ ಪಡೆದ ಪರಶುರಾಮ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮೇ.01: ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ತಾಂತ್ರಿಕ ಎಡವಟ್ಟಿನಿಂದ ಕಡಿಮೆ ಅಂಕ ನೀಡಿ, ಗೊಂದಲವಾಗಿದ್ದು ಮರು ಪರಿಶೀಲನೆ ನಡೆಸಿದಾಗ ಶೇ.94.5ರಷ್ಟು ಅಂಕ ಪಡೆಯುವ ಮೂಲಕ ತಾಲೂಕಿನ ವಿದ್ಯಾರ್ಥಿಯೊಬ್ಬ ಉತ್ತಮ ಅಂಕ ಗಳಿಸಿದ್ದಾರೆ.
ತಾಲೂಕಿನ ಅಲಮರಸಿಕೇರಿ ಗ್ರಾಮದ ಟಿ.ಬಿ.ರಾಜ ಇವರ ಪುತ್ರ ಪರಶುರಾಮ ಆರ್.ವಾಲ್ಮೀಕಿರವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನ್ನಡ 99, ಇಂಗ್ಲೀಷ್ 92, ಭೌತಶಾಸ್ತ್ರ 92, ರಾಸಾಯನಶಾಸ್ತ್ರ 97, ಗಣಿತ 95, ಜೀವಶಾಸ್ತ್ರದಲ್ಲಿ 92 ಒಟ್ಟು 567 ಅಂಕಗಳನ್ನು ಗಳಿಸಿದ್ದಾರೆ.
ದಾವಣಗೆರೆಯ ಶ್ರೀ ಸಿದ್ದೇಶ್ವರ ಪಿಯು ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದು, ದ್ವಿತೀಯ ಪಿಯುಸಿ ಫಲಿತಾಂಶ ಮೊದಲ ಬಾರಿಗೆ ಪ್ರಕಟಗೊಂಡಾಗ ಕನ್ನಡ ವಿಷಯದಲ್ಲಿ ಕೇವಲ 12 ಅಂಕಗಳನ್ನು ನೀಡುವ ಮೂಲಕ ತಾಂತ್ರಿಕ ಎಡವಟ್ಟು ಮಾಡಲಾಗಿತ್ತು, ಈ ಬಗ್ಗೆ ಪೋಷಕರು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತರಿಸಿಕೊಂಡು, ಪರಿಶೀಲನೆಗೆ ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು, ಇಲಾಖೆಯು ಪೋಷಕರ ಮನವಿಯಂತೆ ವಿದ್ಯಾರ್ಥಿಯ ಫಲಿತಾಂಶ ಹಾಗೂ ಉತ್ತರ ಪತ್ರಿಕೆಯನ್ನು ಮರು ಪರಿಶೀಲಿಸಿದಾಗ ವ್ಯತ್ಯಾಸ ಕಂಡು ಬಂದಿದ್ದನ್ನು, ಸರಿಪಡಿಸಿ ಗಳಿಸಿದ ಅಂಕಗಳನ್ನು ನೀಡಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.