ಮೇ.3 ರಂದು ಚಿಕ್ಕಪೇಟ್‍ನಲ್ಲಿ ವಿಶ್ವಧರ್ಮ ಪ್ರವಚನ ಮುಕ್ತಾಯ ಸಮಾರಂಭ
ಬೀದರ್: ಮೇ.1:ಬೀದರ ನಗರದ ಚಿಕ್ಕಪೇಟ್ ಸಮೀಪದ ಬಸವ ಮಂಟಪ ನಿವೇಶನದಲ್ಲಿ ಜರುಗಿದ 21 ದಿವಸಗಳ ವಿಶ್ವಧರ್ಮ ಪ್ರವಚನ ಮೇ 3ರಂದು ಮುಕ್ತಾಯಗೊಳ್ಳಲಿದ್ದು, ಸಮಾರೋಪ ಸಮಾರಂಭವನ್ನು ಡಾ.ಎಸ್.ಎಸ್.ಸಿದ್ದಾರೆಡ್ಡಿ ಫೌಂಡೇಶನ್‍ನ ಡಾ. ಗುರಮ್ಮಾ ಸಿದ್ದಾರೆಡ್ಡಿ ಉದ್ಘಾಟಿಸುವರು. ಮಂಗಲೋತ್ಸವಕ್ಕೆ ಉದಗೀರ, ಲಾತೂರ, ಹೈದರಾಬಾದ, ಜಹಿರಾಬಾದ, ಕಲಬುರಗಿ ಹಾಗೂ ಬೀದರ ಜಿಲ್ಲೆಯ ವಿವಿಧ ರಾಷ್ಟ್ರೀಯ ಬಸವ ದಳಗಳ ಸುಮಾರು ಎರಡು ಸಾವಿರಕ್ಕೂ ಅಧಿಕ ಶರಣ-ಶರಣೆಯರು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೂಜ್ಯರು ಸಮಾರಂಭದ ನೇತೃತ್ವವನ್ನು ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ, ಅಧ್ಯಕ್ಷತೆಯನ್ನು ಮರಕಲ ಗ್ರಾಮ ಪಂಚಾಯತ ಅಧ್ಯಕ್ಷೆ ಈಶ್ವರಮ್ಮ ಬಸವರಾಜ ಓಂಕಾರೆ ವಹಿಸುವರು. ಮುಖ್ಯ ಅತಿಥಿಗಳಾಗಿ ತೆಲಂಗಾಣ ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ವಿಜಯಕುಮಾರ ಪಟ್ನೆ, ಬೀದರ ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಪತ್ರಕರ್ತ ಮಾಳಪ್ಪ ಅಡಸಾರೆ, ಡಾ. ರಾಜಕುಮಾರ ಹೆಬ್ಬಾಳೆ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು, ಯುವಕರು, ಮಹಿಳಾ ಮುಖಂಡರು ಒಳಗೊಂಡಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮತ್ತು ಗ್ರಾಮಗಳಿಂದ ಶರಣರು ಆಗಮಿಸುವರು. ಇದೇ ವೇಳೆ ನೂತನವಾಗಿ ಚಿಕ್ಕಪೇಟ್ ರಾಷ್ಟ್ರೀಯ ಬಸವ ದಳದ ಶಾಖೆ ಉದ್ಘಾಟನೆ ಜರುಗಲಿದೆ. ಪ್ರವಚನದ ಮಂಗಲೋತ್ಸವದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಯಾವುದೇ ಜಾತಿ ಮತ ಪಂಥಗಳ ಭೇದವಿಲ್ಲದೆ ಸರ್ವರೂ ಪಾಲ್ಗೊಳ್ಳಬೇಕೆಂದು ಪೂಜ್ಯರು ಕರೆ ನೀಡಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಲಿಂ.ಧ.ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಅಶೋಕ ಪಾಟೀಲ ಚಿಕ್ಕಪೇಟ್, ಬಸವಂತರಾವ ಬಿರಾದಾರ, ಬಸವರಾಜ ಪಾಟೀಲ ಚಿಕ್ಕಪೇಟ್, ಮಲ್ಲಿಕಾರ್ಜುನ ಜೈಲರ್, ನಾಗಶೆಟ್ಟಿ ರಾಂಪೂರೆ, ಶಶಿಕುಮಾರ ಪಾಟೀಲ, ಶಂಕರ ಪಾಟೀಲ, ರವಿಕಾಂತ ಬಿರಾದಾರ ಸೇರಿದಂತೆ ಇನ್ನಿತರರು ಹಾಜರಿದ್ದರು.