ಪತಂಜಲಿ ಯೋಗ ಸಮಿತಿಯಿಂದ ಮತದಾರರ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ1: ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪವಿತ್ರ ಕರ್ತವ್ಯ ಅದನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ನಮ್ಮ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರ್‍ಲಾಲ್ ಆರ್ಯ ತಿಳಿಸಿದರು.
ಹೊಸಪೇಟೆಯಲ್ಲಿ ಪತಂಜಲಿ ಯೋಗ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆಯ ಸಹಯೋಗದಲ್ಲಿ ಬುದುವಾರ ಬೆಳಿಗ್ಗೆ ವಿಶೇಷ ಯೋಗ ಶಿಬಿರ ಹಾಗೂ ಮತದಾರರ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತದಾನ ಒಂದು ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ನಾಂದಿಯಾಗಲಿದೆ, ಆದರೆ ನಮ್ಮ ಅನೇಕ ಪ್ರಜ್ಞಾವಂತರು, ವಿದ್ಯಾವಂತರೆ ಮತದಾನದಿಂದ ದೂರಊಳಿಯುತ್ತಿರುವುದು ವಿಪರ್ಯಾಸ ಎಂದರು. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಮುಖ್ಯವಾಗಿದ್ದು ಪ್ರತಿಯೊಬ್ಬರು ಮತದಾನ ಮಾಡಬೇಕು ಹಾಗೂ ಮತದಾನಕ್ಕೆ ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೌರಾಯುಕ್ತ ಚಂದ್ರಪ್ಪ ಮಾತನಾಡಿ ಸರ್ಕಾರದ ಯೋಜನೆ ಹಾಗೂ ಯೋಚನೆಗಳು ಫಲಪ್ರಧವಾಗಬೇಕಾದರೆ ಸಾರ್ವಜನಿಕರ ಸಹಭಾಗೀತ್ವ ಮುಖ್ಯವಾಗಲಿದ್ದು ಜಿಲ್ಲಾಡಳಿತ ಈ ಬಾರಿ ವಿಶೇಷ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಪತಂಜಲಿ ಯೋಗಸಮಿತಿ ಕಡಿಮೆ ವiತದಾನವಾದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ಚುನಾವಣೆಯ ವರೆಗೂ ಮತದಾನಕ್ಕೆ ಪ್ರೇರಣೆ ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ, ಇದು ಪ್ರತಿಯೊಬ್ಬ ನಾಗರಿಕರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.  
ಚುನಾವಣೆ, ಮತದಾನದ ಮಹತ್ವಕುರಿತು ಪತಂಜಲಿ ಯೋಗ ಸಮಿತಿಯ ಪರವಾಗಿ ಅನಂತ ಜೋಶಿ ಮಾತನಾಡಿದರು, ರಾಜ್ಯ ಸಮಿತಿಯ ಸದಸ್ಯರಾದ ಬಾಲಚಂದ್ರ ಶರ್ಮಾ, ರಾಜೇಶ್ ಕರ್ವಾ, ರಾಜ್ಯ ಯುವ ಪ್ರಭಾರಿ ಕಿರಣ ಕುಮಾರ, ಶ್ರೀರಾಮ್, ಈಶ್ವರಪ್ಪ, ಯರ್ರಿಯಪ್ಪ, ಮಂಗಳಮ್ಮ, ಗೌರಮ್ಮ, ಚಂದ್ರಿಕಾ, ನಗರಸಭೆಯ ಪರಿಸರ ಅಭಿಯಂತರರಾದ ಆರತಿ, ಸಿಬ್ಬಂದಿಗಳು ಹಾಜರಿದ್ದರು.
ವಿಶೇಷ ಯೋಗ ಶಿಬಿರ: ಇದಕ್ಕೂ ಮುನ್ನ ರಾಜ್ಯ ಪ್ರಭಾರಿಗಳು ಹಾಗೂ ಅಂತರಾಷ್ಟ್ರೀಯ ಯೋಗಾಚಾರ್ಯ ಭವರ್‍ಲಾಲ್ ಆರ್ಯ ವಿಶೇಷ ಯೋಗ ತರಬೇತಿಯನ್ನು ನೀಡಿದರು. ಹೊಸಪೇಟೆಯ ಎಲ್ಲಾ 28 ಕೇಂದ್ರಗಳ ಸಂಚಾಲಕರು, ಪ್ರಮುಖರು, ಯೋಗಪಟುಗಳು ಸಹಸ್ರಾರು ಸಂಖ್ಯೆಯಲ್ಲಿ ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ನತಂರ ಪಾಲ್ಗೊಂಡವರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.