ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಜೀ – ಗಾಯಿತ್ರಿ ಸಿದ್ದೇಶ್ವರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧ : ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅವರ ಕಾರ್ಯ ವೈಖರಿ ಮತ್ತು ಅಭಿವೃದ್ಧಿ ನೋಡಿ ಕಾಂಗ್ರೆಸ್ಗೆ ನಡುಕ ಉಂಟಾಗಿದೆ. ಸಿದ್ದೇಶ್ವರ್ ಅವರ ದೂರದೃಷ್ಟಿ, ಸಮಾಜಮುಖಿ ಕೆಲಸ ನೋಡಿ ಜನ ಅವರನ್ನು 4 ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಸಿದ್ದೇಶ್ವರ್ ಅವರ ಬದಲಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಪಟ್ಟಣ ಮತ್ತು ತ್ಯಾವಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಲಗೆರೆ, ಕೋಟೆಹಾಳು, ಚಿರಡೋಣಿ, ಕಣಿವೆಬಿಳಚಿ, ಬಸವಪಟ್ಟಣ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಜೀ, ದಾವಣಗೆರೆ ಅಭಿವೃದ್ಧಿಗೆ ಇನ್ನೊಂದು ಹೆಸರೇ ಜಿಎಂಎಸ್.. ಅಂದರೆ ಜಿ.ಎಂ.ಸಿದ್ದೇಶ್ವರ್. ಕಾಂಗ್ರೆಸ್ ಅಭ್ಯರ್ಥಿಗೆ  ಇಷ್ಟು ವರ್ಷ ಗ್ರಾಮೀಣ ಭಾಗದಲ್ಲಿ ತಮ್ಮ ಪತಿ, ಮಾವನವರು ಮಾಡಿರುವ ಕೆಲಸ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ನಾವು ಮೋದಿ ಜೀ ಅವರು ಮಾಡಿರುವ ಅಭಿವೃದ್ಧಿ ಕೆಸಲಗಳನ್ನು ಹೇಳಿಕೊಳ್ಳುತ್ತಿದ್ದೇವೆ. ನಮ್ಮ ಮನೆಯವರಾದ ಜಿ.ಎಂ.ಸಿದ್ದೇಶ್ವರ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಂಡು ಮತ ಕೇಳುತ್ತಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಿಲ್ಲೆಗೆ 1071 ಕೋಟಿ ಅನುದಾನ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ 12, ಅಮೃತ್ ಸರೋವರ್ ಯೋಜನೆಗೆ 7.35 ಕೋಟಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಕೋಟ್ಯಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದು ಜಿ.ಎಂ.ಸಿದ್ದೇಶ್ವರ್ ಅವರು. ತ್ಯಾವಣಗಿ, ಬಸವಾಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 2.75 ಕೋಟಿ ರೂಪಾಯಿ ಅನುದಾನ ತಂದು ರೈತ ಸಂಪರ್ಕ ಕೇಂದ್ರ ಹಾಗೂ ಬೀಜೋತ್ಪಾದನ ಕೇಂದ್ರ ಬಲವರ್ಧೆ ಮಾಡಿದ್ದು ಜಿ.ಎಂ.ಸಿದ್ದೇಶ್ವರ್ ಅವರು ಎಂಬುದನ್ನು ನೀವು ಮರೆಯಬಾರದು ಎಂದರು.ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ, ತ್ಯಾವಣಗಿ, ಬಸವಾಪಟ್ಟಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ಅವರ ಕೊಡುಗೆ ಏನು ಎಂಬುದನ್ನು ನೀವೇ ಯೋಚನೆ ಮಾಡಿ. ನೀವು ಕಾಂಗ್ರೆಸ್ಗೆ ಮತ ಹಾಕಿದರೆ ನಿಮ್ಮ ಊರು, ಕ್ಷೇತ್ರ ಅಭಿವೃದ್ಧಿ ಶೂನ್ಯವಾಗತ್ತೆ. ಅದೇ ಬಿಜೆಪಿಗೆ ಮತ ಹಾಕಿದ್ರೆ ಊರು ಸಮೃದ್ಧಿಯಾಗತ್ತೆ, ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಆಗತ್ತೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಸಾಧನೆ, ಸಿದ್ದೇಶ್ವರ್ ಅವರ ಅಭಿವೃದ್ಧಿ ಕೆಲಸಗಳನ್ನು ತಿಳಿಸಿ ಮತ ಕೇಳಬೇಕು. ಇಲ್ಲಿ ನಾನು ಪದನಿಮಿತ್ತ ಅಭ್ಯರ್ಥಿ ಅಷ್ಟೇ. ನಮ್ಮ ಕಾರ್ಯಕರ್ತರಾದ ನೀವೇ ನಿಜವಾದ ಅಭ್ಯರ್ಥಿ. ನೀವೇ ಅಭ್ಯರ್ಥಿ ಎಂದು ಓಡಾಡಿ ಇಲ್ಲಿ ನನ್ನನ್ನು ಬಹುಮತದಿಂದ ಗೆಲ್ಲಿಸಿ ಕಳುಹಿಸಿದರೆ ಮೋದಿ ಜೀ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದು ಕರೆ ನೀಡಿದರು.
