ಅಡಿಕೆ ಸಂಬಂಧಿತ ಕೈಗಾರಿಕೆಗಳು, ಸೂಳೆಕೆರೆ ಸಂರಕ್ಷಣೆಗೆ ಆದ್ಯತೆ: ಜಿ. ಬಿ. ವಿನಯ್ ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧: ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್  ರೋಡ್ ಶೋ ನಡೆಸಿ, ಭರ್ಜರಿ ಪ್ರಚಾರ ನಡೆಸಿದರು.ಚನ್ನಗಿರಿ ತಾಲೂಕಿನ ಕೆರೆಬಿಳಚಿ, ನಲ್ಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಚನ್ನಗಿರಿ ಪಟ್ಟಣದಲ್ಲಿ ಭಾರೀ ಸಂಖ್ಯೆಯಲ್ಲಿ ಯುವಕರು, ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಬೈಕ್ ರ್ಯಾಲಿ ನಡೆಸಿದರು. ಬಳಿಕ ವಿನಯ್ ಕುಮಾರ್ ಅವರು ಪಟ್ಟಣದಲ್ಲಿ ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಕೆರೆಬಿಳಚಿ ಗ್ರಾಮದಲ್ಲಿ ವಿನಯ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮುಸ್ಲಿಂ ಸಮಾಜದವರು ವಿನಯ್ ಕುಮಾರ್ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಮದ ಮುಖಂಡರಾದ ಇರ್ಫಾನ್, ಇಂತಿಯಾಜ್, ಮೊಹಮ್ಮದ್ ಆಲಿ, ಜಬೀರ್, ಫಯಾಜ್, ಮೊಹಮ್ಮದ್ ರಫಿಕ್, ಜಬಿ, ಶರೀಫ, ಆಸೀಫ ಮತ್ತಿತರರು ಹಾಜರಿದ್ದರು.ಚನ್ನಗಿರಿ ಪಟ್ಟಣದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಚನ್ನಗಿರಿ ತಾಲೂಕಿನಲ್ಲಿ ಅಡಿಕೆ ಬೆಳೆಗಾರರು ಹೆಚ್ಚಿದ್ದಾರೆ. ಇದುವರೆಗೆ ಅಡಿಕೆಗೆ ಸಂಬಂಧಿತ ಕೈಗಾರಿಕೆಗಳು ಯಾಕೆ ಬಂದಿಲ್ಲ. ಬೆಳೆಗಾರರ ಹಿತ ಕಾಪಾಡುವಂಥ ಕೆಲಸ ಆಗದಿರುವುದು ಬೇಸರದ ಸಂಗತಿ. ಅಡಿಕೆ ಮಾತ್ರವಲ್ಲ, ಚಾಕೂಲೇಟ್, ಪೇಂಟಿಂಗ್ ಸೇರಿದಂತೆ ಉಪ ಉತ್ಪನ್ನಗಳ ಕೈಗಾರಿಕೆಗಳು ಬಂದರೆ ಮತ್ತಷ್ಟು ಅಡಿಕೆಗೆ ಬೆಲೆ ಬರುತ್ತದೆ. ಈ ಬಗ್ಗೆ ಅಧಿಕಾರ ನಡೆಸಿದವರು ಯಾಕೆ ಯೋಚಿಸಿಲ್ಲ ಎಂದು ಪ್ರಶ್ನಿಸಿದರು.ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಬಹುದಿತ್ತು. ಭದ್ರಾ ನದಿ ನೀರು ಬಂದರೂ ಎಷ್ಟೋ ರೈತರಿಗೆ ಸಿಗುತ್ತಿಲ್ಲ. ಇದಕ್ಕೆ ಕಾರಣ ರಾಜಕೀಯ ಇಚ್ಛಾಶಕ್ತಿ. ಚನ್ನಗಿರಿ ಪಟ್ಟಣದಲ್ಲಿಸುಸಜ್ಜಿತವಾದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ಇಲ್ಲ. ಉದ್ಯೋಗಾವಕಾಶ ಸೃಷ್ಟಿಸುವಂಥ ಕೈಗಾರಿಕೆಗಳು ಇಲ್ಲ. ಹೈಟೆಕ್ ಶಾಲೆಗಳಿಲ್ಲ, ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೆ ಸಿಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿರುವ ಈ ಕ್ಷೇತ್ರದಲ್ಲಿನನಗೆ ಹೆಚ್ಚು ಮುನ್ನಡೆ ಬರುವಂತೆ ಆಶೀರ್ವದಿಸಿ ಎಂದು ಮನವಿ ಮಾಡಿದರು.ವಿನಯ ನಡಿಗೆ ಹಳ್ಳಿ ಕಡೆಗೆ ಎಂಬಂತೆ ವಿನಯ ನಡಿಗೆ ಪಾರ್ಲಿಮೆಂಟ್ ಕಡೆಗೆ ಕಳುಹಿಸಿಕೊಡಿ. ಯುವಕರೇ ನನ್ನನ್ನು ಗೆಲ್ಲಿಸಬೇಕು. ಶೇಕಡಾ 33 ರಷ್ಟು ಯುವಪೀಳಿಗೆಯ ಮತ ಇದೆ. ನನಗೆ ನೀಡುವ ಪ್ರತಿಯೊಂದು ಮತವೂ ಹಾಳಾಗುವುದಿಲ್ಲ. ಕ್ರಮ ಸಂಖ್ಯೆ 28 ಗ್ಯಾಸ್ ಸಿಲಿಂಡರ್ ಹಾಕುವ ಮತ ಅಭಿವೃದ್ಧಿಗೆ ನೀಡಿದಂತೆ ಎಂದು ಹೇಳಿದರು.ಈ ವೇಳೆ ಚನ್ನಗಿರಿ ಕುರುಬ ಸಮಾಜದ ತಾಲೂಕು ಅಧ್ಯಕ್ಷ ಗೋಪಿ, ಚಂದ್ರಣ್ಣ, ಎ. ಸಿ. ಚಂದ್ರು, ಮಂಜು ನೀತಿಗೆರೆ, ಕೃಷ್ಣಪ್ಪ, ಕುಶಾಲ್ ಮತ್ತಿತರರು ಉಪಸ್ಥಿತರಿದ್ದರು.