ಬೀಳ್ಕೊಡುಗೆ ಕಾರ್ಯಕ್ರಮ
ಹುಬ್ಬಳ್ಳಿ,ಮೇ.1: ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬಸ್ಸುಗಳ ಸಮರ್ಪಕ ನಿರ್ವಹಣೆ ಮಾಡುವಲ್ಲಿ ತಾಂತ್ರಿಕ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ತಾಂತ್ರಿಕ ಇಂಜಿನಿಯರ್ ಬಸವರಾಜ ಅಮ್ಮನವರ ಹೇಳಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ 2ನೇ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರದಲ್ಲಿ ವಯೋನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಲಲಿತವಾಗಿರಲು ಬಸ್ಸುಗಳು ಸುಸಜ್ಜಿತವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಇದಕ್ಕೆ ತಾಂತ್ರಿಕ ಸಿಬ್ಬಂದಿಗಳು ಲಭ್ಯ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಯಾವುದೇ ರೀತಿಯ ಅವಘಡಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಹಲವಾರು ವೈರುದ್ಯಗಳ ನಡುವೆ 30 ರಿಂದ 40 ವರ್ಷಗಳ ಸುಧೀರ್ಘ ಅವಧಿಗೆ ಕರ್ತವ್ಯ ನಿರ್ವಹಿಸುವ ಸಾರಿಗೆ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ನಿವೃತ್ತ ಸಿಬ್ಬಂದಿ ಸೊಪ್ಪಿನ ಮಾತನಾಡಿ ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದರೆ ಸಂಸ್ಥೆ ಎಂದೂ ನಮ್ಮ ಕೈ ಬಿಡುವುದಿಲ್ಲ ಎಂದು ಹೇಳಿದರು.
ವಯೋನಿವೃತ್ತಿ ಹೊಂದಿದ ತಾಂತ್ರಿಕ ಸಿಬ್ಬಂದಿಗಳಾದ ಎ.ಡಿ.ಜಾಗೀರದಾರ, ಬಾಬುರಾವ್,ಆರ್.ಎಂ.ಸೊಪ್ಪಿನ, ಅರುಣ ಜುಜಾರ ಹಾಗೂ ಎಂ.ಎಸ್.ಬಂಕಾಪುರ ರವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗ್ರಾಮಾಂತರ 2ನೇ ಘಟಕದಲ್ಲಿ ನಾಯ್ಕರ ಹಾಗೂ ವಿಭಾಗೀಯ ಕಾರ್ಯಾಗಾರದಲ್ಲಿ ಶರಣಬಸವ ಕಾರ್ಯಕ್ರಮ ನಿರೂಪಿಸಿದರು
ಘಟಕ ವ್ಯವಸ್ಥಾಪಕಿ ರೋಹಿಣಿ ಬೇವಿನಕಟ್ಟಿ, ವಿಭಾಗೀಯ ಕಾರ್ಯಾಧೀಕ್ಷಕ ರಮೇಶ ಕರಿಂಡಿ ಕಾರ್ಮಿಕ ಮುಖಂಡ ಆರ್.ಎಫ್.ಕವಳೀಕಾಯಿ ಮತ್ತು ಸಿಬ್ಬಂದಿಗಳು ಇದ್ದರು.