ನಡೆ ನುಡಿ ಪೂರ್ವಜರ ಬಳುವಳಿ: ವಿಜಯ್ ರಾಮೇಗೌಡ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ: ಮೇ.01:- ರೂಢಿಸಂಪ್ರದಾಯಗಳು, ಆಚಾರವಿಚಾರಗಳು, ಹಬ್ಬಹರಿದಿನಗಳು, ನಡೆ, ನುಡಿ ಮುಂತಾದುವುಗಳು ನಮ್ಮ ಪೂರ್ವಜರು ನಮಗೆ ನೀಡಿರುವ ಬಳುವಳಿಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುವಂತೆ ಮಿತ್ರ ಫೌಂಡೇಷನ್ ಅಧ್ಯಕ್ಷ ಹಾಗು ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಕರೆ ನೀಡಿದರು.
ಅವರು ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ನಡೆದ ರಂಗದ ಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಬಹಳ ಹಿಂದಿನಿಂದಲೂ ದೇವಾಲಯಗಳನ್ನು ನಿರ್ಮಿಸುವ, ದೇವರುಗಳನ್ನು ಪೂಜಿಸುವ ಪರಿಪಾಠಗಳನ್ನು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ. ಇವುಗಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದ್ದು ಸನಾತನ ಧರ್ಮದ ಪ್ರತಿಬಿಂಬವಾಗಿವೆ. ಮಾನವನಿಗೆ ಕಷ್ಟ ಬಂದಾಗ ಭಗವಂತನಲ್ಲಿ ಮೊರೆಯಿಟ್ಟು ಅವುಗಳನ್ನು ಪರಿಹರಿಸಿಕೊಂಡು ಹಬ್ಬಹರಿದಿನಗಳನ್ನು ಆಚರಿಸಿ ಆ ದಿನ ರಂಗಕುಣಿತ, ಭಜನೆ, ದೇವರನಾಮಗಳ ಪಠಣ ಸೇರಿದಂತೆ ವಿವಿಧ ರೀತಿಯ ಆಚರಣೆಗಳನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.
ಅವುಗಳು ನಮ್ಮ ಮುಂದಿನ ಪರಂಪರೆಗೂ ಮುಂದುವರೆಯಲು ನಾವುಗಳು ಕೈಜೋಡಿಸಬೇಕು. ರಂಗಕುಣಿತ ಒಂದು ಕಲೆಯಾಗಿದ್ದು ಬಹಳ ಹಿಂದಿನಿಂದಲೂ ವಿಭಿನ್ನ ಶೈಲಿಯಲ್ಲಿ ಹೆಜ್ಜೆಗಳನ್ನು ಹಾಕಿ ಕುಣಿಯುವ ಹಾಗೂ ನೋಡುಗರನ್ನು ಆಕರ್ಷಿಸುವ ಕುಣಿತವಾಗಿದೆ.
ಜಾನಪದ ಶೈಲಿಯ ಹಾಡುಗಳನ್ನು ಹಿನ್ನೆಲೆಯಾಗಿ ಮೆಲುಕು ಹಾಕುತ್ತಾ ಕುಣಿಯುವ ರಂಗಕುಣಿತವನ್ನು ಇಂದಿನ ಯುವಕ ಮಿತ್ರರು ಕಲಿಯಬೇಕು.
ಹೊಸಹೊಳಲು ಗ್ರಾಮ ಎಲ್ಲಾ ವರ್ಗಗಳು, ಪಂಗಡಗಳಿರುವ ದೊಡ್ಡ ಗ್ರಾಮವಾಗಿದ್ದು ಇಲ್ಲಿ ವರ್ಷಪೂರ್ತಿ ವಿವಿಧ ರೀತಿಯ ಜಾತ್ರೆ, ಹಬ್ಬಗಳು, ಪೂಜೆಗಳು, ನೆರವೇರುತ್ತವೆ. ಎಲ್ಲಾ ಸಮುದಾಯಗಳ ಹಿರಿಯರು ತಮ್ಮ ಮುಂದಿನ ತಲೆಮಾರಿನ ಯುವಕರಿಗೆ ಹಳೆಯ ಹಾಗೂ ನಮ್ಮ ಪೂರ್ವಜರು ನೀಡಿರುವ ವಿಭಿನ್ನ ಆಚರಣೆಗಳನ್ನು ತೋರಿಸಿಕೊಟ್ಟು ಅವುಗಳನ್ನು ಅನುಪಾಲನೆ ಮಾಡಲು ತಿಳಿಸಿ ತಾವೂ ಸಹ ಅದರಲ್ಲಿ ಭಾಗಿಯಾಗುತ್ತಾರೆ. ಹೀಗೆ ಆಚರಣೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ.
ಹಬ್ಬಹರಿದಿನಗಳಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಸಂಬಂಧಿಕರು ಒಂದೆಡೆ ಸೇರಿ ಸಂತೋಷದಿಂದ ಕಷ್ಟಸುಖಗಳನ್ನು ಹಂಚಿಕೊಳ್ಳುವ ದಿನಗಳಾಗಿರುತ್ತವೆ. ರಂಗದ ಹಬ್ಬ ಈ ಗ್ರಾಮದ ವಿಶಿಷ್ಟ ಹಬ್ಬವಾಗಿದ್ದು ವಿಶೇಷವಾಗಿ ಆಚರಿಸಲ್ಪಡುತ್ತದೆ.
ವಿವಿಧ ಪೂಜಾ ಕಾರ್ಯಗಳ ನಂತರ ರಾತ್ರಿ ವೇಳೆ ಗ್ರಾಮದ ಹಿರಿಯರು, ಮುಖಂಡರು ಯುವಕರು ಎಲ್ಲರೂ ಒಂದು ಕಡೆಸೇರಿ ರಂಗಕುಣಿಯಲಾಗುತ್ತದೆ. ತಮಟೆಯ ಸದ್ದಿಗೆ ಹೆಜ್ಜೆಗಳನ್ನು ಇಡುತ್ತಾ ಕೈಗೆ ಟವಲ್ ಹಿಡಿದುಕೊಂಡು ಜಾನಪದ ಶೈಲಿಯಲ್ಲಿ ಕುಣಿಯುವ ರಂಗಕುಣಿತ ಬಹಳ ಆಕರ್ಷಣೀಯವಾಗಿರುತ್ತದೆ. ಅದನ್ನು ಅನುಭವಿಸಿಯೇ ತೀರಬೇಕು ಎಂದ ವಿಜಯರಾಮೇಗೌಡ ಮಂಡ್ಯ ಲೋಕಸಭಾ ಚುನಾವಣೆ ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಇದಕ್ಕೆ ಕಾರಣಕರ್ತರಾದ ಎಲ್ಲಾ ಮತದಾರರಿಗೂ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೂ ತಮ್ಮ ಕೃತಜ್ಞತೆಗಳನ್ನು ಸಮರ್ಪಿಸಿದರಲ್ಲದೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪಕ್ಷ ರಾಜಕಾರಣ.
ಅನಂತರ ನಾವೆಲ್ಲರೂ ಒಗ್ಗೂಡಿ ಪಕ್ಷ ರಾಜಕಾರಣವನ್ನು ಬದಿಗೊತ್ತಿ ಅಭಿವೃದ್ದಿ ರಾಜಕಾರಣ ಮಾಡಬೇಕು. ಯುವಕರು ಗ್ರಾಮಗಳ ಅಭಿವೃದ್ದಿಯ ಬಗ್ಗೆ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಪುರಸಭಾ ಸದಸ್ಯ ಹೆಚ್.ಎನ್.ಪ್ರವೀಣ್, ವಿಜಯ್‍ರಾಮೇಗೌಡರ ಆಪ್ತಸಹಾಯಕ ಬಸವರಾಜು, ಗ್ರಾಮದ ಮುಖಂಡರು ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.