ಈಜಲು ಹೋದ ಇಬ್ಬರು ಯುವಕರು ನೀರು ಪಾಲು
ಶಿಡ್ಲಘಟ್ಟ,ಮೇ,೦೧-ಬಿಸಿಲಿಗೆ ತಾಪಕ್ಕೆ ನೀರು ಶೇಕರಣೆ ಮಾಡಿರುವ ಕೃಷಿ ಹೊಂಡದಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದ ಸುಬ್ರಮಣಿ ಗೌರಮ್ಮ ನವರ ೧೫ ವರ್ಷದ ಒಬ್ಬನೇ ಮಗ ನಿತಿನ್ ಕುಮಾರ್ ಹಾಗೂ ಅಂಗರೇಕನಹಳ್ಳಿ ಗ್ರಾಮದ ಹನುಮಂತಪ್ಪ ಹಾಗೂ ಪದ್ಮ ರವರ ಮಗ ೧೫ ವರ್ಷದ ಮಂಜುನಾಥ್ ಈ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದ ಯುವಕರು ಈಜು ಬಂದರೂ ಸಹ ಕೃಷಿ ಹೊಂಡದಲ್ಲಿ ಪ್ಲಾಸ್ಟಿಕ್ ಪೇಪರ್ ಹಾಕಿರುವ ಕಾರಣ ಹಿಡಿತಕ್ಕೆ ಏನು ಸಿಗದೆ ನೀರಿನಲ್ಲಿ ಮುಣಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮಲ್ಲಹಳ್ಳಿ ಗ್ರಾಮದ ಮಂಜುನಾಥ್ ಎಂಬುವರಿಗೆ ಸೇರಿದ ತೋಟದ ಕೃಷಿ ಹೊಂಡದಲ್ಲಿ ಒಟ್ಟು ಮೂರು ಜನ ಈಜಲು ಬಂದಿದ್ದಾರೆ. ಇಬ್ಬರು ನೀರಿಗೆ ಬಿದ್ದವರು ಮೇಲೆ ಬರದ ಕಾರಣ ಒಬ್ಬ ತಕ್ಷಣ ಮನೆಗೆ ಹೋಗಿ ಘಟನೆಯ ಬಗ್ಗೆ ತಿಳಿಸಿದ್ದಾನೆ. ತಕ್ಷಣ ಪೋಷಕರು ಸ್ಥಳಕ್ಕಾಗಮಿಸಿದರು ಪ್ರಯೋಜನವಾಗಿಲ್ಲ ಇಬ್ಬರ ಪ್ರಾಣ ಕಳೆದುಕೊಂಡಿದ್ದು ಎರಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು ಶವ ಪರೀಕ್ಷೆಗೂ ಸಹ ನೀಡದೆ ಪಟ್ಟು ಇಡಿದ ಕುಟುಂಬಸ್ಥರಿಗೆ ಪೊಲೀಸರು ಸಾಂತ್ವನ ಹೇಳಿ ಮೃತ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಶ್ರೀನಿವಾಸ್ ಸ್ಥಳ ಪರಿಶೀಲನೆ ನಡೆಸಿದರು. ಸಂದರ್ಭದಲ್ಲಿ ಗ್ರಾಮಾಂತರ ಪಿಎಸ್‌ಐ ಸತೀಶ್ ಮತ್ತು ಸಿಬ್ಬಂದಿ ಹಾಜರಿದ್ದರು.