ಜನಸಾಗರದ ಕಂಬನಿಯಲ್ಲೇ ಪ್ರಸಾದ್ ಅಂತ್ಯಸಂಸ್ಕಾರ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.01:-ಸಹಸ್ರಾರು ಮಂದಿಯ ಅಶ್ರುತರ್ಪಣದ ನಡುವೆ ದಲಿತ ಸಮುದಾಯದ ಪ್ರಶ್ನಾತೀತ ನಾಯಕ, ಹಿರಿಯ ರಾಜಕೀಯ ಮುತ್ಸದ್ದಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಪಂಚಭೂತಗಳಲ್ಲಿ ಲೀನವಾದರು.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಧರ್ಮಾತೀತವಾಗಿ ಹಲವು ರಾಜಕೀಯ ನಾಯಕರು, ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಮೈಸೂರಿನ ಅಶೋಕಪುರಂ ಬಡಾವಣೆಯ ಎನ್‍ಟಿಎಂ ಶಾಲಾ ಆವರಣಕ್ಕೆ ತಂಡೋಪ ತಂಡವಾಗಿ ಆಗಮಿಸಿ ಅಗಲಿದ ಹಿರಿಯ ರಾಜಕೀಯ ಚೇತನ ವಿ. ಶ್ರೀನಿವಾಸ ಪ್ರಸಾದ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ವಿ.ಶ್ರೀನಿವಾಸ್ ಪ್ರಸಾದ್ ಅವರ ಅಂತಿಮ ದರ್ಶನಕ್ಕೆ ಎನ್‍ಟಿಎಂ ಶಾಲಾ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೂಡ ಸಾವಿರಾರು ಜನರು ಮೃತರ ಅಂತಿಮ ದರ್ಶನ ಪಡೆದರು. ಬೆಳಗ್ಗಿನಿಂದಲೇ ಎನ್‍ಟಿಎಂ ಶಾಲೆಯತ್ತ ಆಗಮಿಸಿದ ಹಲವು ಗಣ್ಯರು, ಜನಸಾಮಾನ್ಯರು ಹಾಗೂ ಪ್ರಸಾದ್ ಅವರ ಬೆಂಬಲಿಗರು ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರವನ್ನು ವೀಕ್ಷಣೆ ಮಾಡಿ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಹಲವು ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಸಂಸದ ಪ್ರತಾಪ್ ಸಿಂಹ, ಡಾ.ಸಿ.ಎನ್. ಮಂಜುನಾಥ್, ಯದುವೀರ್ ಒಡೆಯರ್, ಸುನೀಲ್ ಬೋಸ್, ಮಾಜಿ ಶಾಸಕರಾದ ಎನ್. ಮಹೇಶ್, ಎಂ.ಕೆ. ಸೋಮಶೇಖರ್ ಸೇರಿದಂತೆ ಅನೇಕರು ಪ್ರಸಾದ್ ಅವರ ಅಂತಿಮ ದರ್ಶನ ಪಡೆದು, ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.
ಅಂತಿಮಯಾತ್ರೆ: ವಿ. ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಅಂತ್ಯಸಂಸ್ಕಾರ ನಡೆದ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಅಶೋಕಪುರಂನ ಎನ್‍ಟಿಎಂ ಶಾಲಾ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಮೃತದೇಹವನ್ನು ಮಧ್ಯಾಹ್ನ 12 ಗಂಟೆ ವೇಳೆಗೆ ಅಂತಿಮ ಯಾತ್ರೆ ನಡೆಸಲಾಯಿತು. ಬಳಿಕ ಅಶೋಕಪುರಂನ ಪ್ರಮುಖ ಬೀದಿಗಳಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ವಾಹನದಲ್ಲಿ ಪ್ರಸಾದ್ ಕುಟುಂಬದ ಸದಸ್ಯರು ಹಾಗೂ ಪ್ರಮುಖರಿದ್ದರೆ, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎನ್. ಮಹೇಶ್ ಸೇರಿದಂತೆ ಸಾವಿರಾರು ಮಂದಿ ಪ್ರಸಾದ್ ಅವರ ಅಭಿಮಾನಿಗಳು, ಸಾರ್ವಜನಿಕರು ಅಂತಿಮಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಂತಿಮ ಯಾತ್ರೆ ಬಳಿಕ ಮಧ್ಯಾಹ್ನ 1.20ರ ಸುಮಾರಿಗೆ ಮಾನಂದವಾಡಿ ರಸ್ತೆಯಲ್ಲಿರುವ ಅಂಬೇಡ್ಕರ್ ಟ್ರಸ್ಟ್ ಆವರಣ ತಲುಪಿತು.
ಕಣ್ಣೀರಿಟ್ಟ ಪ್ರತಾಪ್ ಸಿಂಹ: ವಿ. ಶ್ರೀನಿವಾಸ್ ಪ್ರಸಾದ್ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಭಾವುಕರಾದರು. ಅಂತಿಮ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರು ನಿಷ್ಪಕ್ಷಪಾತವಾಗಿ ನಿಲುವು ತೆಗೆದುಕೊಳ್ಳುತ್ತಿದ್ದ, ದ್ವೇಷ, ಅಸೂಯೆ ಇಲ್ಲದ ವ್ಯಕ್ತಿಯಾಗಿದ್ದರು. ಅವರು ಕಾಂಗ್ರೆಸ್‍ನಲ್ಲಿದ್ದಾಗಲೂ ಕರೆದು ಮಾತನಾಡಿಸುತ್ತಿದ್ದರು. ಬಳಿಕ ಅವರೊಂದಿಗೆ ಲೋಕಸಭೆಗೆ ಹೋಗುವ ಅವಕಾಶ ನನಗೆ ದೊರೆಯಿತು. ಈ ಭಾಗದಲ್ಲಿ ಸಾಕಷ್ಟು ಸಜ್ಜನ ರಾಜಕಾರಣಿಗಳಿದ್ದಾರೆ. ಆದರೆ ಒಳ್ಳೆಯ ರಾಜಕಾರಣಿಗಳಿಗೆ ಇದು ಕಾಲವಲ್ಲ. ಪ್ರಸಾದ್ ಅವರ ನಿಧನದಿಂದ ನನಗೆ ವೈಯುಕ್ತಿಕ ನಷ್ಟವಾಗಿದೆ. ನನಗೆ ಬುದ್ದಿ, ಕಿವಿಮಾತು ಹೇಳುತ್ತಿದ್ದರು. ಏನನ್ನೇ ಹೇಳಿದರು ನಾಲ್ಕು ಗೋಡೆ ಮಧ್ಯದಲ್ಲಿ ಹೇಳುತ್ತಿದ್ದ ಅವರು, ನನ್ನ ಬಗ್ಗೆ ಹೊರಗೆ ಟೀಕೆ ಮಾಡದೆ ಮಗನ ರೀತಿ ನೋಡಿಕೊಂಡರು ಎಂದು ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಒಡನಾಟ ನೆನೆದು ಭಾವುಕರಾದರು.
ಬೌದ್ಧ ಧಮ್ಮದ ಅನುಸಾರ ವಿಧಿವಿಧಾನ: ಸಹಸ್ರ ಸಹಸ್ರ ಮಂದಿಯ ಅಶ್ರು ತರ್ಪಣದ ನಡುವೆ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಅಂತಿಮ ವಿಧಿವಿಧಾನ ಮೈಸೂರಿನ ಡಾ.ಬಿ.ಆರ್. ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು.
ಬೌದ್ಧ ಧಮ್ಮದ ಅನುಯಾಯಿಗಳಾಗಿದ್ದ ಶ್ರೀನಿವಾಸ ಪ್ರಸಾದ್ ಅವರ ಇಚ್ಛೆಯಂತೆ ಬೌದ್ಧ ಧಮ್ಮ ಬಿಕ್ಕುಗಳು ಅಂತಿಮ ಕ್ಷಣದ ಕಾರ್ಯದಲ್ಲಿ ಪಾಲ್ಗೊಂಡು ಸಂಸ್ಕಾರ ನಡೆಸಿಕೊಟ್ಟರು. ಆ ಮೂಲಕ ಮೇರು ಸ್ವಾಭಿಮಾನದ ದಲಿತ ನಕ್ಷತ್ರವೊಂದು ಭೂತಾಯ ಒಡಲಲ್ಲಿ ಲೀನವಾಯಿತು. ಬೌದ್ಧ ಧಮ್ಮ ಸಂಪ್ರದಾಯ ಮತ್ತು ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ರಾಜಕೀಯ ನಾಯಕನಿಗೆ ಸಹಸ್ರಾರು ಬೆಂಬಲಿಗರ ಸಮುಖದಲ್ಲಿ ಅಂತಿಮ ವಿದಾಯ ನೀಡಲಾಯಿತು.
ನಗರದ ಮಾನಂದವಾಡಿ ರಸ್ತೆಯಲ್ಲಿರುವ ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಟ್ರಸ್ಟ್ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶ್ರೀನಿವಾಸಪ್ರಸಾದ್ ಪರ ಘೋಷಣೆ ಕೂಗಿದ ಬೆಂಬಲಿಗರು ತಮ ನೆಚ್ಚಿನ ನಾಯಕನಿಗೆ ಗೌರವ ಸಮರ್ಪಿಸಿದರು. ಬೆಂಗಳೂರಿನ ಥೇರಾ ಮಹಾಬೋಧಿ ಸೊಸೈಟಿಯ ಆನಂದ್ ಭಂತೇಜಿ ನೇತೃತ್ವದಲ್ಲಿ ಸುಮಾರು 20 ಬೌದ್ಧ ಬಿಕ್ಕುಗಳು ಬೌದ್ಧ ಧಮದ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೊದಲಿಗೆ ಬುದ್ಧ ವಂದನೆ ಧಮ ವಂದನೆ ಸಂಘ ವಂದನೆ ಪುಣ್ಯಾನು ಬೋಧನೆ, ರತನ ಸೂತ್ರಗಳ ಪಠಣ ಮಾಡಿದರು.
ಸರ್ಕಾರಿ ಗೌರವ ಸಲ್ಲಿಕೆ: ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೆÇಲೀಸ್ ಬ್ಯಾಂಡ್ ಕಲಾವಿದರು ರಾಷ್ಟ್ರಗೀತೆ ನುಡಿಸಿದರು. ಪೆÇಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಹುಟ್ಟೂರಲ್ಲಿ ಅಂತಿಮ ಯಾತ್ರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ತೆರೆದ ವಾಹನದಲ್ಲಿ 12 ಗಂಟೆ 7 ನಿಮಿಷಕ್ಕೆ ಅಂತಿಮ ಯಾತ್ರೆ ಆರಂಭಗೊಂಡಿತು. ಅಶೋಕಪುರಂ ನಿವಾಸಿಗಳು ತಮ ಊರಿನ ಮನೆಯ ಮಗನಿಗೆ ಗೌರವವನ್ನು ಸಲ್ಲಿಸಿ ವಿದಾಯ ಪೂರ್ವಕವಾಗಿ ಕಳುಹಿಸಿಕೊಟ್ಟರು.
ಅಶೋಕಪುರಂ 1ನೇ ಕ್ರಾಸ್, 2ನೇ ಕ್ರಾಸ್‍ನಲ್ಲಿರುವ ತಮ ಹುಟ್ಟಿದ ಮನೆಯಲ್ಲಿ ಸಹೋದರಿ ಕುಟುಂಬದವರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. 6ನೇ ಕ್ರಾಸ್ ಚಿಕ್ಕ ಗಡಿಯಾರದ ಬಳಿ ಆರ್‍ಎಸ್‍ಎಸ್ ಮುಖಂಡ ಮಾ.ವೆಂಕಟರಾಮ್ ಮಾಲಾರ್ಪಣೆ ಮಾಡಿದರು. 11 ಮತ್ತು 12ನೇ ಕ್ರಾಸ್ ನಲ್ಲಿ ಪುಷ್ಪ ನಮನ ಸಲ್ಲಿಸಿದರು. ರಸ್ತೆಯ ಎರಡೂ ಬದಿಯಲ್ಲಿ ಜನರು ನಿಂತು ಗೌರವ ಸಮರ್ಪಿಸಿದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ತಾವು ಹುಟ್ಟಿ ಬೆಳೆದ ಅಶೋಕಪುರಂನಲ್ಲಿಯೇ ಶ್ರೀನಿವಾಸಪ್ರಸಾದ್ ಮಣ್ಣಾದರು.
ಮನೋರಖ್ಖಿತ ಭಂತೇಜಿ, ಕಲ್ಯಾಣಸಿರಿ ಭಂತೇಜಿ , ಬೋಧಿ ದತ್ತ ಭಂತೆಜಿ, ನಾಗರತ್ನ ಭಂತೇಜಿ, ಬೋಧಿ ರತ್ನ ಭಂತೇಜಿ, ಸಮನರಿಯ ಭಂತೇಜಿ, ಧಮಚಾರಿಗಳಾದ ಪುಟ್ಟಸ್ವಾಮಿ ಮತ್ತು ಬಸವರಾಜು, 20 ಉಪಾಸಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗಾಂಧಿನಗರದ ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೆÇಲೀಸ್ ಆಯುಕ್ತ ಬಿ. ರಮೇಶ್, ಡಿಸಿಪಿ ಬಿ.ಟಿ. ಜಾಹ್ನವಿ ಮುಂತಾದವರಿದ್ದರು.