ಹೆಚ್ಚುತ್ತಿರುವ ಬಿಸಿಲಿನ ತಾಪ ಆಸ್ಪತ್ರೆ ಪಾಲಾಗುತ್ತಿರುವ ಸಾರ್ವಜನಿಕರು
ವಿಜಯಪುರ.ಮೇ೧: ನಿರಂತರವಾಗಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯಕ್ಕಿಂತ ನಾಲ್ಕು ಐದು ಪಟ್ಟು ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಹೋಗುವಂತಾಗಿದೆ.
ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶ್ರೀಧರ್ ರವರು ಮಾತನಾಡುತ್ತ ನಿರಂತರವಾಗಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ವಾಂತಿ ಭೇದಿ, ಕಾಲರ, ಹೆಪಟೈಟಿಸ್, ಹಾಗೂ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿದ್ದು ಮತ್ತೊಂದೆಡೆ ರಕ್ತದೊತ್ತಡ ಹಾಗೂ ಡಿಹೈಡ್ರೇಶನ್ (ನಿರ್ಜಲೀಕರಣ)ಆಗುವುದರೊಂದಿಗೆ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಆಸ್ಪತ್ರೆಯಲ್ಲಿ ಎಲ್ಲಾ ಅವಶ್ಯಕ ಸೇವೆಗಳು ಲಭ್ಯವಿದೆ ಎಂದು ತಿಳಿಸಿದರು.
ದೇಹದ ಉಷ್ಣಾಂಶ ಎಲ್ಲರಲ್ಲಿಯೂ ಹೆಚ್ಚಾಗುತ್ತಿದ್ದು ಆಸ್ಪತ್ರೆಗೆ ಬರುವ ರೋಗಿಗಳಿಗೂ ಗ್ಲುಕೋಸ್ ನೀಡಲಾಗುತ್ತಿದ್ದು ಬಹಳಷ್ಟು ಮಂದಿಯಲ್ಲಿ ನೀರು ಸೇವನೆ ಕಡಿಮೆ ಇರುವುದರಿಂದ, ಯೂರಿನರಿ ಇನ್ಫೆಕ್ಷನ್(ಸೋಂಕು) ಸಹ ಹೆಚ್ಚಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಪ್ರತಿದಿನ ಶುದ್ಧವಾದ ಐದರಿಂದ ಆರು ಲೀಟರ್ ನೀರನ್ನು ಕುಡಿಯಬೇಕಾಗಿದೆ, ಇದರೊಂದಿಗೆ ದೇಹವನ್ನು ತಂಪಾಗಿಸಲು ಎಳನೀರು, ಮಜ್ಜಿಗೆ ತಾಜಾ ಹಣ್ಣುಗಳಿಂದ ತಯಾರಿಸಿದ ತಂಪಾದ ಹಣ್ಣಿನ ರಸಗಳು ನಿಂಬೆಹಣ್ಣಿನ ಜ್ಯೂಸು, ಆರೆಂಜ್, ದ್ರಾಕ್ಷಿ ,ಸೌದೆ ಕಾಯಿ, ಕಲ್ಲಂಗಡಿ ಮುಂತಾದವುಗಳನ್ನು ಹೆಚ್ಚಾಗಿ ಬಳಸಬೇಕೆಂದು ತಿಳಿಸಿದರು.
ಇದರ ಜೊತೆ ಎಲ್ಲೆಡೆ ಜಾತ್ರೆ, ತೇರು ಮುಂತಾದವು ಹೆಚ್ಚಾಗಿದ್ದು ಅಲ್ಲಿ ಸ್ವಚ್ಛತೆ ಹಾಗೂ ಶುದ್ಧತೆ ಕಡಿಮೆ ಇದ್ದು ಸ್ವಚ್ಛತೆ ಇಲ್ಲದ ಕೈಗಳಿಂದ ಮಜ್ಜಿಗೆ, ಪಾನಕ ಮಾಡಿ ಅದು ಇನ್ನಿತರರು ಬಳಸುವುದರಿಂದ ವಾಂತಿ ಭೇದಿ, ಕಾಲರ ಮತ್ತಿತರೆ ಕಾಯಿಲೆಗಳು ಸಂಭವಿಸಲಿದೆ ಎಂದು ಶುದ್ಧವಾದ ನೀರು ದೊರೆಯದ ಸಂದರ್ಭದಲ್ಲಿ ಮನೆಗಳಲ್ಲಿ ಕಾಯಿಸಿ ಆರಿಸಿದ ನೀರನ್ನು ಬಳಸಬೇಕೆಂದು ತಿಳಿಸಿದರು.