ಶರಣರ ಬದುಕು ಸರ್ವಕಾಲಕ್ಕೂ ಆದರ್ಶ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.01:- ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾದುದುದಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖ ತಿಳಿಸಿದರು.
ಊಟಿಯ ತೀಟಕಲ್ ಜೆಎಸ್‍ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಕ್ಷೇತ್ರ, ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಏ.29ರಿಂದ ಮೇ 4 ರವರೆಗೆ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರ ಉದ್ಘಾಟಿಸಿ ಶರಣ ಸಂಸ್ಕೃತಿ ಕುರಿತು ಮಾತನಾಡುತ್ತ ತಿಳಿಸಿದರು.
ನಡೆ-ನುಡಿಗಳಲ್ಲಿ ಅಂತರವಿರದ ಜೀವನ ಶರಣರದಾಗಿತ್ತು. ಶರಣರು ಕರ್ಮ ಸಿದ್ದಾಂತವನ್ನು ಕಾಯಕ ಸಿದ್ದಾಂತವಾಗಿಸಿದವರು. ಅವರ ನಡೆನುಡಿಗಳಲ್ಲಿ ಸಮನ್ವಯವಿತ್ತು. ಅರಿವು ಆಚಾರದ ಬದುಕು ಅವರದಾಗಿತ್ತು. ಅವರ ವಚನಗಳು ಅಂತರಂಗದ ಅನುಭಾವದ ನುಡಿಗಳಾಗಿವೆ. ಜನವಾಣಿಯನ್ನು ದೇವ ವಾಣಿಯನ್ನಾಗಿಸಿದುದು ಶರಣ ಸಂಸ್ಕೃತಿ, ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರು ಮರೆಯಬೇಕು.
ಲಿಂಗ ಪೂಜೆಯಾದರೂ ಮರೆಯಬೇಕು ಎಂದು ಹೇಳುವ ಶರಣರ ಮಾತುಗಳು ಕಾಯಕಕ್ಕೆ ನೀಡಿದ ಪ್ರಾಶಸ್ತ್ರ ಸಾರಿ ಹೇಳುತ್ತದೆ ಎಂದು ಹೇಳಿದರು.
ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಪತ್ರಕರ್ತರಾದವರು ಸಾಮಾಜಿಕ ಬದ್ಧತೆ ಹೊಂದಿರಬೇಕು. ಹಿಂದೆ ಪತ್ರಕರ್ತರ ಜವಾಬ್ದಾರಿ ಬಹಳ ಹೆಚ್ಚಾಗಿತ್ತು. ಅದನ್ನೆ ಧರ್ಮವನ್ನಾಗಿಸಿಕೊಂಡಿದ್ದರು. ಆದರೆ, ಈಗ ಉದ್ಯಮವಾಗಿದೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಜನರ ಮನೋಭಾವ ಮತ್ತು ಜೀವನ ಪದ್ಧತಿ ಬದಲಾಗಿದೆ. ಮುದ್ರಣ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮ ಬಹಳ ಪರಿಣಾಮಕಾರಿಯಾಗಿ ಬೆಳೆದಿದೆ. ಪತ್ರಕರ್ತರಾದವರು ಸಕಾರಾತ್ಮಕ ಲೇಖನಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕಾ ಧರ್ಮವನ್ನು ಪತ್ರಕರ್ತರಾದವರು ಯಾವಾಗಲೂ ಪಾಲಿಸಬೇಕು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿಯ ವಿರಕ್ತಮಠದ ಡಾ.ಮಹಾಂತ ಪ್ರಭುಸ್ವಾಮಿಗಳು ಮನಸ್ಸನ್ನು ಮನಸ್ಸನ್ನು ಪರಿಶುದ್ಧಗೊಳಿಸಿಕೊಂಡಲ್ಲಿ ನಿಶ್ಚಿಂತ ಬದುಕು ಸಾಧ್ಯ. ಮಾನವನು ನೆಮ್ಮದಿಯ ಜೀವನ ನಡೆಸಲು ಚಿಂತೆಯಿಂದ ವಿಮುಕ್ತನಾಗಬೇಕು. ಸದಾ ಪರಮಾತ್ಮನನ್ನು ಕುರಿತು ಆಲೋಚನೆ ಮಾಡುತ್ತಿದ್ದಲ್ಲಿ ಸಂತೋಷ ಸಾಧ್ಯವಾಗುತ್ತದೆ. ನಾವು ಜಗತ್ತಿನಲ್ಲಿರುವ ಸಕಲ ಜೀವ ರಾಶಿಗಳ ಮೇಲೆ ಪ್ರೇಮವನ್ನಿಟ್ಟುಕೊಳ್ಳುವುದೆ ತಪಸ್ಸಾಗಿದೆ. ನಿರ್ಮಲ ಮನಸ್ಸು ನಿಶ್ಚಿಂತ ಜೀವನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕಾಣಲು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ- ಧ್ಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು ಶಿಬಿರದಲ್ಲಿ ಸಾಂಗ್ಲಿ ಜಿಲ್ಲೆ, (ಮಹಾರಾಷ್ಟ್ರ) ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರಾವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ 230ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.