ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಿಂದ ಮೋದಿಗೆ ನಡುಕ: ಯೋಗೇಂದ್ರ ಯಾದವ್
ಕಲಬುರಗಿ:ಏ.30:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಾತಿವಾದ, ಕೋಮುವಾದ ಮುಂತಾದವುಗಳಿಗೆ ಆಸ್ಪದ ಇಲ್ಲ. ಹೀಗಾಗಿ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯಾಗುತ್ತಿದ್ದು, ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತೀವ್ರ ನಡುಕ ಉಂಟಾಗಿದೆ ಎಂದು ರಾಷ್ಟ್ರೀಯ ರೈತ ನಾಯಕ ಯೋಗೇಂದ್ರ ಯಾದವ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಸ್ವತ: ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿದ್ದು, ಎಲ್ಲೆಡೆ ಬಿಜೆಪಿ ವಿರೋಧಿ ಅಲೆಯು ಉಂಟಾಗಿದೆ ಎಂದರು.
ಈಗಾಗಲೇ ನಾನು ದೇಶದ ರಾಜಸ್ತಾನ್, ಹರಿಯಾಣಾ, ಉತ್ತರ ಪ್ರದೇಶ್, ಮಹಾರಾಷ್ಟ್ರ, ಬಿಹಾರ್ ಮುಂತಾದ ರಾಜ್ಯಗಳನ್ನು ಸುತ್ತಾಡಿದ್ದೇನೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರ ಗಾಳಿಯು ಎಲ್ಲಿಯೂ ಕಂಡುಬರುತ್ತಿಲ್ಲ ಎಂದು ಅವರು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿಯೇ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಅಲ್ಲಿ ಬಿಜೆಪಿಯು ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದ ಅವರು, ಬಿಜೆಪಿಯ ಸರ್ವಾಧಿಕಾರ ಧೋರಣೆ, ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಜನಸಾಮಾನ್ಯರ ವಿರೋಧಿ ನೀತಿಗಳಿಂದಾಗಿ ಎಲ್ಲ ರಾಜ್ಯಗಳಲ್ಲಿಯೂ ಸಹ ಬಿಜೆಪಿಯ ವಿರೋಧಿ ಅಲೆ ಇದೆ ಎಂದು ಅವರು ಹೇಳಿದರು.
ಹರಿಯಾಣಾ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗ್ರಾಮಗಳಲ್ಲಿ ಕೂಡ ಬಿಟ್ಟುಕೊಳ್ಳುತ್ತಿಲ್ಲ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮೊದಲಿಗಿಂತ ಕಮ್ಮಿ ಸ್ಥಾನಗಳು ಲಭಿಸಲಿದ್ದು, ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ತೀವ್ರ ಪೈಪೆÇೀಟಿಯಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅವರು ತಿಳಿಸಿದರು.
ಚುನಾವಣೆ ವೇಳೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸದೆ ಮುಸ್ಲಿಂರ ವಿರುದ್ಧ ಹಿಂದುಗಳನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆಯುವ ಕೀಳು ಮಟ್ಟಕ್ಕಿಳಿದಿರುವ ಬಿಜೆಪಿಗೆ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಇಂತಹ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಮೊದಲ ಹಂತದ ಮತದಾನದ ಸಮೀಕ್ಷೆಯ ಬಳಿಕ ಪ್ರಧಾನಿ ಮೋದಯವರ ಮಾತಿನ ದಾಟಿಯೇ ಬದಲಾಗಿದ್ದು, ಹಿಂದೂಗಳ ತಾಳಿ ಕಿತ್ತು ಮುಸ್ಲಿಂರಿಗೆ ಹಣ ಕೊಡುತ್ತಾರೆ ಎಂಬಂತಹ ಹತಾಶೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಬ್ ಕಿ ಬಾರ್ ಚಾರ್ ಸೌ ಪಾರ್ ಅನ್ನುವುದು ಬೂಟಾಟಿಕೆ ಹೊರತು, ಆತ್ಮವಿಶ್ವಾಸವಲ್ಲ. ಇದು 420 ಜನರು ಮಾಡುವ ಸಣ್ಣತನದ ಕೆಲಸ ಎಂದು ಮೂದಲಿಸಿದ ಅವರು, ನನ್ನ ಬದುಕಿನುದ್ದಕ್ಕೂ ಕಾಂಗ್ರೆಸ್ ವಿರೋಧಿಸುತ್ತ ಬಂದಿದ್ದರೂ ದೇಶ ಹಾಗೂ ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್‍ಗೆ ಬೆಂಬಲಿಸುವಂತೆ ಅವರು ಮನವಿ ಮಾಡಿದರು.