ನಾನೆಂದೂ ಎಡ-ಬಲ ಭೇದ ಮಾಡಿಲ್ಲ ಎಂದ ಆಲಗೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.1: ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರಿಗೆ ಮಾದಿಗ ಸಮುದಾಯ ಬೆಂಬಲ ವ್ಯಕ್ತಪಡಿಸಿತು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ನೇತೃತ್ವದಲ್ಲಿ ನಡೆದ ಮಾದಿಗ ಬೃಹತ್ ಸಮಾವೇಶದಲ್ಲಿ ಮಾದಿಗ ಸಮುದಾಯದವರು ಅಭೂತಪೂರ್ವ ಬೆಂಬಲ ಘೋಷಿಸಿದರು.
ಜಿಲ್ಲೆಯ ಎಲ್ಲ ಭಾಗಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಮಾದಿಗ ಸಮುದಯ ಜನರು ಸೇರಿದ್ದರು. ಈ ಬಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಒಕ್ಕೊರಲಿನಿಂದ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮಾತನಾಡಿ, ರಾಜು ಆಲಗೂರ ಅವರು ಸಭ್ಯ, ಸೌಜನ್ಯದ ವ್ಯಕ್ತಿ ಇದ್ದಾರೆ. ಸಮುದಾಯದವರು ಸ್ಪರ್ಧಿಸಿದ್ದಾರೆ ಎಂದು ಇಲ್ಲಿಯವರೆಗೆ ಒಬ್ಬರಿಗೆ ನೀವೆಲ್ಲ ಹೆಚ್ಚಿನ ಮತ ನೀಡುತ್ತ ಬಂದಿರುವಿರಿ. ಆದರೆ ಈ ಸಲ ಯೋಚಿಸಿ ನಿಮ್ಮ ಹಿತಕ್ಕಾಗಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿ ಎಂದರು.
ಗ್ಯಾರಂಟಿ ಯೋಜನೆಗಳಿಂದ ನಿಮಗೆಲ್ಲ ಅನುಕೂಲವಾಗಿದೆ. ನಿಮ್ಮ ಮಕ್ಕಳು ಸುಶಿಕ್ಷಿತರಾಗಲು ಸರಕಾರ ಶ್ರಮಿಸಿದೆ. ದಮನಿತರ ಏಳಿಗೆಗಾಗಿ ಕಾಂಗ್ರೆಸ್ ಯಾವತ್ತೂ ಮಿಡಿದಿದೆ. ಬಿಜೆಪಿ ಅಭ್ಯರ್ಥಿ ಮತ್ತು ಆ ಪಕ್ಷದಿಂದ ನಿಮಗೆ ಇಲ್ಲಿಯವರೆಗೆ ಯಾವುದೇ ಲಾಭವಾಗಿಲ್ಲ ಎಂದರು.
ಹಿಂದುತ್ವ ಬಿಜೆಪಿಯವರ ಮನೆ ಆಸ್ತಿ ಅಲ್ಲ. ಹಿಂದುಳಿದ ಜಾತಿಯವರ ಮತ ಕೇಳಲು ಸಂವಿಧಾನ ವಿರೋಧಿ ಜನಕ್ಕೆ ನೈತಿಕತೆ ಇಲ್ಲ. ವಿಶ್ವದಲ್ಲಿ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಮೊದಲು ಕಸಾಯಿಖಾನೆ ಬಂದ್ ಮಾಡಿ ಗೋಮಾತೆ ಬಗ್ಗೆ ನಿಜವಾದ ಪ್ರೀತಿ ತೋರಿಸಿ. ಚೀನಾ ಭೂಮಿ ಅತಿಕ್ರಮಿಸಿದೆ. ನಮ್ಮ ಪ್ರಧಾನಿ ದುರ್ಬಲ, ಅವರು ಯುವಕರ ತಲೆಕೆಡಿಸುತ್ತಾರೆ. ಇದೆಲ್ಲಕ್ಕೂ ಭಿನ್ನವಾಗಿರುವ ದಲಿತಪರ, ಜೀವಪರ ವ್ಯಕ್ತಿಯಾದ ಆಲಗೂರಗೆ ಮತ ಹಾಕಿ ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ, ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಭಾರತವನ್ನು ಸವಾರ್ಂಗೀಣ ಅಭಿವೃದ್ಧಿ ಮಾಡಿದೆ. ಈ ದೇಶವನ್ನು ಸೂಜಿಯಿಂದ ವಿಮಾನಯಾನ, ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೆ ಕಟ್ಟಲಾಗಿದೆ. ರಾಜ್ಯದಲ್ಲೂ ನಮ್ಮ ಸರಕಾರ ನಿಮ್ಮ ಪ್ರಗತಿಪರವಾಗಿದೆ. ಇಲ್ಲಿ ಆಲಗೂರರು ತಮ್ಮೆಲ್ಲರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಕನಸಲ್ಲೂ ನಾನು ಎಡ-ಬಲ ಸಮಾಜ ಎಂದು ಬೇಧಬಾವ ಮಾಡಿಲ್ಲ. ನಾನು ಒಂದು ಪಂಗಡಕ್ಕೆ ಮಾತ್ರ ಸೀಮಿತವಾಗಲು ಇಚ್ಛಿಸುವುದಿಲ್ಲ. ಇದು ರಾಜಕಾರಣಕ್ಕಾಗಿ ನಾನು ಹೇಳುತ್ತಿಲ್ಲ ಎಂದರು.
ಕಾಂಗ್ರೆಸ್ ನಮಗೆ ಬಹಳ ಉಪಕಾರ ಮಾಡಿದೆ. ಶೋಷಿತ ಸಮಾಜ ಬದಲಾಗಲು ಕಾಂಗ್ರೆಸ್ ಕಾರಣವಾಗಿದೆ. ನಮಗೆ ಉಸಿರಾಡುವಂತೆ ಮಾಡಲಾಗಿದೆ. ನಮಗೆ ಒಂದೆಕರೆ ಭೂಮಿ ಕೂಡ ಇರಲಿಲ್ಲ. ಇದರಿಂದ ಶ್ರೀಮಂತರ ವಿರೋಧವನ್ನು ಕಾಂಗ್ರೆಸ್ ಎದುರಿಸಿದೆ. ಹಲವು ಕಾಯ್ದೆಗಳ ಮೂಲಕ ನಮ್ಮ ಬದುಕನ್ನು ನೆಹರೂರಿಂದ ಇಂದಿರಾಗಾಂಧಿಯವರ ತನಕ ರೂಪಿಸಲಾಗಿದೆ. ಹಲವು ಕಾಯ್ದೆಯ ತಿದ್ದುಪಡಿ ಮಾಡಿ ಸಾಮಾನ್ಯರ ಬಾಳು ಉದ್ಧರಿಸಲು ಯತ್ನಿಸಲಾಗಿದೆ ಎಂದರು.
ಗ್ಯಾರಂಟಿಗಳ ಮೂಲಕ ಹೆಣ್ಣುಮಕ್ಕಳ ನಿತ್ಯ ಜೀವನ ಹಗುರಾಗಿದೆ. ನಿಮ್ಮ ಜೊತೆ ನಾನು ಯಾವತ್ತೂ ಇರುವೆ ಎಂದರು.
ಯುವತಿ ಪೂಜಾ ದೊಡ್ಡಮನಿ ಮಾತನಾಡಿ, ನಾವು ಸರಿಯಾದ ಶಿಕ್ಷಣ ಪಡೆದರೆ ಬಿಜೆಪಿ ಭ್ರಮೆಗಳಿಂದ ಹೊರಬರಲು ಸಾಧ್ಯ. ಹಿಂದೂಗಳ ಹೆಸರು ಹೇಳುವ ಮೋದಿಯವರು ನಮ್ಮನ್ನು ಹಿಂದೂಗಳೆಂದು ಒಪ್ಪುತ್ತಾರಾ ಎಂದು ಪ್ರಶ್ನಿಸಿ, ಯೋಚಿಸಿ ಮತ ನೀಡಿ ಎಂದು ಹೇಳಿದರು.
ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ, ನಿವೃತ್ತ ಐಎಎಸ್ ಅಧಿಕಾರಿ ಎಚ್.ಆರ್. ಭೀಮಾಶಂಕರ ವೇದಿಕೆಯಲ್ಲಿ ಇದ್ದರು.
ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಪ್ರಾಸ್ತಾವಿಕ ಮಾತನಾಡಿದರು.
ಸುಭಾಸÀ ಕಾಲೇಬಾಗ, ಕೆ.ಕೆ.ಕಳಸದ ಸೇರಿದಂತೆ ಹಲವಾರು ಮುಖಂಡರು, ಸಮುದಾಯದ ಪ್ರಮುಖರು ಸಮಾವೇಶದಲ್ಲಿ ಇದ್ದರು.