ಚಿತ್ತಾಪುರದಲ್ಲಿ ಮೇ 3ರಂದು ಕೋಲಿ ಸಮಾವೇಶ
ಅಫಜಲಪುರ:ಮೇ.1: ಕೋಲಿ, ಕಬ್ಬಲಿಗ ಇತರೆ ಪರ್ಯಾಯ ಪದಗಳ ಪರಿಶಿಷ್ಟ ಪಂಗಡ (ಎಸ್‍ಟಿ) ಸೇರ್ಪಡೆ ಸಂಬಂಧ ಮೇ 3ರಂದು ಚಿತ್ತಾಪುರದಲ್ಲಿ ವಿಭಾಗ ಮಟ್ಟದ ಕೋಲಿ ಸಮಾಜದ ಸಮಾವೇಶ ಆಯೋಜಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಬೇಕು ಎಂದು ಕೋಲಿ ಸಮಾಜದ ಹಿರಿಯ ಮುಖಂಡರಾದ ಬಸವರಾಜ ಸಪ್ಪನಗೋಳ ಹಾಗೂ ಶಂಕರ ಮ್ಯಾಕೇರಿ ತಿಳಿಸಿದರು.
ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲಿ ಸಮಾಜದ ಸಮಾವೇಶದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಮುದಾಯದ ಸುಮಾರು 50 ಸಾವಿರ ಜನರು ಪಾಲ್ಗೊಳ್ಳುವ ಭರವಸೆ ಇದೆ. ಕಾಂಗ್ರೆಸ್ಸಿಗರು ನಮ್ಮ ಸಮಾಜದ ಕೆಲವು ಮುಖಂಡರನ್ನು ಮುಂದಿಟ್ಟುಕೊಂಡು ಮೀಸಲಾತಿಯ ಸಾಮಾಜಿಕ ನ್ಯಾಯ ಕೊಡದೆ, ಚುನಾವಣೆ ವೇಳೆ ಹುಸಿ ಭರವಸೆ ಕೊಟ್ಟು ದಾರಿ ತಪ್ಪಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಎಸ್‍ಟಿ ಭರವಸೆ ಕೊಟ್ಟಿದ್ದು ನಿಜ.ಆದರೆ, ಮೀಸಲಾತಿ ಜಾರಿಗೆ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದವು.1931ರ ಜಾತಿಗಣತಿ ವರದಿಯಲ್ಲಿ ಇಲ್ಲದ ಕೋಲಿ, ಕಬ್ಬಲಿಗ ಪರ್ಯಾಯ ಪದವಾದ ಗಂಗಾಮತ ಪದ ಸೇರ್ಪಡೆಯಾಗಿತ್ತು.ಇದ್ಯಾವುದನ್ನು ಪರಿಶೀಲಿಸದೆ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ (ಆರ್‍ಜಿಐ) ಕಳುಹಿಸಿದ್ದರಿಂದ ಎಸ್‍ಟಿ ಸೇರ್ಪಡೆಗೆ ಅಡ್ಡಿಯಾಗಿತ್ತು.ಗಂಗಾಮತ ಪದವನ್ನು ಬಿಟ್ಟು ಕೋಲಿ,ಕಬ್ಬಲಿಗ, ಬೆಸ್ತ, ಮೊಗವೀರದಂತಹ 5-6 ಪರ್ಯಾಯ ಪದಗಳನ್ನು ಆರ್‍ಜಿಐ ಕಳುಹಿಸಲಾಗುವುದು.ಎಸ್‍ಟಿ ಸೇರ್ಪಡೆಯ ಶೇ. 95ರಷ್ಟು ಕಾರ್ಯಗಳು ಪೂರ್ಣಗೊಂಡಿವೆ.ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಶಕಗಳ ಬೇಡಿಕೆಗೆ ಸ್ಪಂದನೆ ಸಿಗಲಿದೆ.ತಳವಾರ ಸಮುದಾಯವನ್ನು ಎಸ್‍ಟಿಗೆ ಸೇರಿಸಿದ್ದು ಬಿಪಿಪಿಯೇ ಹೊರತು ಕಾಂಗ್ರೆಸ್ ಅಲ್ಲ,ಮಲ್ಲಿಕಾರ್ಜುನ ಖರ್ಗೆ ಅವರು ದಶಕಗಳ ಕಾಲ ಶಾಸಕ,ಎರಡು ಬಾರಿ ಸಂಸದ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದರೂ ಒಂದು ಬಾರಿಯೂ ನಮ್ಮ ಸಮುದಾಯದ ಎಸ್‍ಟಿ ಬಗ್ಗೆ ಮಾತನಾಡಲಿಲ್ಲ.ಸಮಾಜಕ್ಕೆ ವಂಚನೆ ಮಾಡಿಕೊಂಡು ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದರೂ ಸಾಮಾಜಿಕ ನ್ಯಾಯ ಕೊಡಿಸಲಿಲ್ಲ’ ಎಂದು ಆರೋಪಿಸಿದರು.