ಪೋಲ್ ಡೇ ಮಾನಿಟರಿಂಗ್ ತಂಡದೊಂದಿಗೆ ಡಿ.ಸಿ. ಸಭೆಗಂಟೆವಾರು ಮತದಾನ ಮಾಹಿತಿ ವಿಳಂಬವಿಲ್ಲದೆ ಅಪಲೋಡ್ ಮಾಡಬೇಕು:ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಏ.30:ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು, ಅಂದು ಗಂಟೆವಾರು ಮತದಾನದ ಮಾಹಿತಿ ವಿಳಂಬ ಮಾಡದೆ ಎಲೆಕ್ಟ್ ಒನ್ (Electone) ತಂತ್ರಾಂಶದಲ್ಲಿ ಬಿ.ಎಲ್.ಓ.ಗಳು ಅಪಲೋಡ್ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಐ.ಟಿ ಮತ್ತು ಪೋಲ್ ಡೇ ಮಾನಿಟರಿಂಗ್ ತಂಡದೊಂದಿಗೆ ಸಭೆ ನಡೆಸಿದ ಅವರು, ನಿಧಾನಗತಿ ಮತದಾನ ಪ್ರಮಾಣ ಅಪಲೋಡ್ ಮಾಡುವುದನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಅವರು ಪೋಲಿಂಗ್ ಸಿಬ್ಬಂದಿ ಮತಗಟ್ಟೆ ಆಗಮನದಿಂದ ಹಿಡಿದು ಮತದಾನ ದಿನದಂದು ಪೋಲಿಂಗ್ ಏಜೆಂಟ್ ಆಗಮನ, ಮಾಕ್ ಪೋಲ್ ಆರಂಭ, ನಿಜವಾದ ಮತದಾನ ಆರಂಭ, ಮತದಾನ ಮುಕ್ತಾಯ, ಪೋಲಿಂಗ್ ಪಾರ್ಟಿ ನಿರ್ಗಮನ, ಎರಡು ಗಂಟೆಗೊಮ್ಮೆ ವೋಟರ್ ಟರ್ನೌಟ್ ದತ್ತಾಂಶ ಸೇರಿದಂತೆ ಆ ದಿನದ 26 ಚಟುವಟಿಕೆ ಕುರಿತು ತಂತ್ರಾಂಶದಲ್ಲಿಯೇ ಮಾಹಿತಿ ನಮೂದಿಸಬೇಕು ಎಂದರು.
ಚುನಾವಣಾಧಿಕಾರಿಗಳ ಹಂತದಲ್ಲಿ ಪೋಲ್ ಡೇ ಮಾನಿಟರಿಂಗ್ ಕಾರ್ಯ ಉಸ್ತುವಾರಿಗೆ ನೇಮಿಸಿದ ತಂಡ ಸಹಾಯಕ ಚುನಾವಣಾಧಿಕಾರಿಗಳ ಹಂತದ ತಂಡದೊಂದಿಗೆ ಸತತ ಸಂಪರ್ಕ ಸಾಧಿಸಬೇಕು. ಅದೇ ರೀತಿ ಎ.ಆರ್.ಓ ಹಂತದ ತಂಡ ಸೆಕ್ಟರ್ ಅಧಿಕಾರಿ, ಬಿ.ಎಲ್.ಓ. ಜೊತೆ ಸಂಪರ್ಕದಲ್ಲಿದ್ದು, ಕ್ಷಣ-ಕ್ಷಣದ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದರು.
ಮತಗಟ್ಟೆಯ ಪ್ರೆಸಿಡಿಂಗ್ ಅಧಿಕಾರಿ, ಸೆಕ್ಟರ್ ಅಧಿಕಾರಿ ಹಾಗೂ ಬಿ.ಎಲ್.ಓ ಗಳು ಮತದಾನ ದಿನದಂದು ತಮ್ಮ ಜೊತೆಗೆ ಮೋಬೈಲ್ ಸುಸ್ಥಿಯಲ್ಲಿಟ್ಟುಬೇಕು. ಮೊಬೈಲ್‍ಗೆ ಬೇಕಾದ ಚಾರ್ಜರ್ ಸಹ ಹೊಂದಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆಫ್, ಪ್ಲೈಟ್ ಮೋಡ್‍ನಲ್ಲಿ ಹಾಕಬಾರದು. ತುರ್ತು ಸಂದರ್ಭದಲ್ಲಿ ಚುನಾವಣಾ ಸಂಬಂಧಿತ ಅಧಿಕಾರಿಗಳು ಕರೆ ಮಾಡಿದಾಗ ಸಂಪರ್ಕಕ್ಕೆ ಲಭ್ಯರಾಗಬೇಕು ಎಂದು ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಐ.ಟಿ. ನೋಡಲ್ ಅಧಿಕಾರಿ ಮಹಾಂತೇಶ ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.