ಎಸ್ ಯು ಸಿ ಐ  ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ ಪರ ಪ್ರಚಾರ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೩೦; ಮೋದಿ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳಿಂದಾಗಿ ಜನರ ಬದುಕು ಬೀದಿಗೆ ಬಂದಿದೆ. ದೇಶದಲ್ಲಿ ಅತಿ ದಿನ 7,000ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಹಾವೇರಿಯ ಯುವಕನೊಬ್ಬ ತಾಯಿಯ ಹಸಿವು ನೀಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಮಕ್ಕಳು ಹಸಿವೆಯಿಂದ ಸಾಯುತ್ತಿದ್ದರೂ, ಮತಿಭ್ರಮಣೆಗೊಂಡ ತಾಯಿಯೊಬ್ಬಳು ‘ನನಗೆ ಊಟ ಕೊಡಿ’ ಎಂದು ಅಂಗಲಾಚುತ್ತಿದ್ದಳು. ಜನರ ಈ ಹಸಿವಿನ ಕೂಗು ಪ್ರಧಾನಿ ಮೋದಿಯವರಿಗೆ ಕೇಳಿಸದೆ? ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ. ಉಮಾ ಪ್ರಶ್ನೆ ಮಾಡಿದರು. ನಗರದ ಎಸಿ ಕಚೇರಿ ಮುಂಭಾಗದಲ್ಲಿ ನಡೆದ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರ ಪ್ರಚಾರ ಸಭೆಯಲ್ಲಿ ಮಾತನಾಡಿದರು.18ನೇ ಲೋಕಸಭಾ ಚುನಾವಣೆಯು ಘೋಷಣೆಯಾಗಿರುವ ಇಂದಿನ ಸಂದರ್ಭದಲ್ಲಿ ದೇಶವು ಕಂಡು ಕೇಳರಿಯದ ಘೋರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಒಂದು ಕಡೆ, ಆಡಳಿತಾರೂಢ ಎನ್ ಡಿ ಎ, ಇನ್ನೊಂದೆಡೆ, ಇಂಡಿಯಾ ಮೈತ್ರಿಗಳು ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ ಇವರು ಯಾರು ಕೂಡ ದೇಶದ ಜನರ ಬದುಕಿನ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ಅವರು ಪದವಿಗಳಿಗಾಗಿ ಟಿಕೆಟ್ ಗಳಿಗಾಗಿ ಚುನಾವಣೆ ನಡೆಸುತ್ತಿದ್ದಾರೆ. ಆಳ್ವಿಕ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಚನೆಯಾಗಿದೆ. ಎಡವಾದಿ ಪಕ್ಷಗಳಾದ ಸಿಪಿಐ ಸಿಪಿಐಎಂ ಕೂಡ ಪ್ಯಾಸಿವ್ಯಾದಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣ ನೀಡಿ ಈ ಒಕ್ಕೂಟ ಸೇರಿದ್ದಾರೆ. ಆದರೆ, ಬಹುಕಾಲ ದೇಶವನ್ನಾಳಿದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಯನ್ನು ಹೇರಿ ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದಿದೆ. ಅಂದಿನ ಕಾಂಗ್ರೆಸ್ಸಿನ ನೀತಿಗಳನ್ನೇ ಇಂದು ಬಿಜೆಪಿಯು ಮುಂದುವರೆಸಿದೆಯಷ್ಟೆ!. ಇವರೆಲ್ಲರೂ ಕೂಡ ಒಂದೇ. ಈಗ ಚುನಾವಣೆಗಳಲ್ಲಿ ಹಣ ಸುರಿದು ಇವರು ಮತಗಳನ್ನು ಖರೀದಿ ಮಾಡುತ್ತಾರೆ. ಎಂದು ಹೇಳಿದರು.ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯ ಕೂಡ ಮಾತನಾಡಿ ಜನರ ಬೆಂಬಲವನ್ನು ಯಾಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಕೈದಾಳೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಅಪರ್ಣಾ ಬಿ ಆರ್, ಜಿಲ್ಲಾ ಸಮಿತಿ ಸದಸ್ಯರಾದ ಮದು ತೊಗಲೇರೆ, ಮಂಜುನಾಥ್ ಕುಕ್ವಾಡ, ಟಿವಿಎಸ್ ರಾಜು ಸೇರಿದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.