ಅಂಬೇಡ್ಕರ್, ಬಾಬೂಜಿ ಸಾಮಾಜಿಕ ಪರಿವರ್ತನೆಯ ನಾಣ್ಯದ ಎರಡು ಮುಖಗಳು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೩೦:“ಸಾಧನೆಯಲ್ಲಿ ಸಾರ್ಥಕತೆ ಕಂಡುಕೊಂಡ, ಜಾತಿ ಜಾಡ್ಯ ಜಾಲಾಡಿಸಿದ ಹಾಗೂ ಸಾಮಾಜಿಕ ಪರಿವರ್ತನೆಯ ನಾಣ್ಯದ ಎರಡು ಮುಖಗಳು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್” ಎಂದು  ಕುವೆಂಪು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ ಅಭಿಪ್ರಾಯಪಟ್ಟರು.ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಯಲಯದ ಜ್ಞಾನ ಗಂಗೋತ್ರಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸಮಾನತೆ, ಅವಮಾನ ಮತ್ತು ಹಸಿವುಗಳಿಂದ ತಲ್ಲಣಿಸುತ್ತಿದ್ದ ಜನತೆಗೆ ಅರಿವು ಭಿತ್ತಿ ಅಭಿವೃದ್ಧಿ ಪಥದಲ್ಲಿ ನೆಲೆಯಾಗಿಸಲು ಅಪಮಾನ, ಅಗೌರವಗಳಿಗೆ ಹೆದರದೇ ಏದುರಿಸುವ ತಾಕತ್ತು ಸರ್ವರೂ ಸಂಪಾದಿಸಿಕೊಳ್ಳಬೇಕೆಂದು ಸಾರಿದ ಮಹಾಪುರುಷರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್. ಅವರದು ಅನುಭವಿ ರೂಪಿತ ವ್ಯಕ್ತಿತ್ವ. ಇವರುಗಳ ಜೀವನ ಚರಿತ್ರೆಯೆಂದರೆ ವಿರೂಪವಾಗಿರುವ ಭಾರತೀಯ ಸಾಮಾಜಿಕ ಸಂರಚನೆಯನ್ನು ಸುಸ್ವರೂಪಕ್ಕೆ ಪ್ರೇರೇಪಿಸುವ ಚಿಂತನೆಗಳ ಚರಿತ್ರೆಯಾಗಿದೆ ಎಂದರು.