ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ: ಸೈಯದ್ ಖಾಲಿದ್ ಅಹ್ಮದ್
ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೩೦; ಕಳೆದ ವಿಧಾನಸಭಾ ಚುನಾವಣೆಯ ವೇಳೆ ದಾವಣಗೆರೆಯಲ್ಲಿ ಕೊನೆಯ ರ್ಯಾಲಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಿದ್ದರು. ಹರಪನಹಳ್ಳಿಯೂ ಒಳಗೊಂಡಂತೆ ಎಂಟು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿತ್ತು. ಏಪ್ರಿಲ್ 28ಕ್ಕೆ ಇಲ್ಲಿಗೆ ಬರುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಆಟ ಮೋದಿ ಆಟ ನಡೆಯಲ್ಲ ಎಂದು ಅಖಿಲ ಭಾರತೀಯ  ಯುವ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮೋದಿ ಅವರು ದಾವಣಗೆರೆಗೆ ಬಂದು ಹೋಗಿದ್ದರೂ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿದ್ಯಾವಂತರು, ಸಮಾಜ ಸೇವೆ ಮಾಡಿದವರು. ಯೋಗ್ಯ ಅಭ್ಯರ್ಥಿ. ಸಂಸತ್ ನಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಮಂಡನೆ ಮಾಡಲಿದ್ದಾರೆ. ಹಾಗಾಗಿ, ಜಿಲ್ಲೆಯ ಜನರು ಕಾಂಗ್ರೆಸ್ ಅಭ್ಯರ್ಥಿ ಪರ ಒಲವು ಹೊಂದಿದ್ದು, ಗೆಲುವು ಖಚಿತ ಎಂದು ತಿಳಿಸಿದ್ದಾರೆ. ಡಾ. ಜಿ. ಎಂ. ಸಿದ್ದೇಶ್ವರರ ವಿರುದ್ಧ ಬಿಜೆಪಿ ಪಕ್ಷದ ನಾಯಕರೇ ಯಾವೆಲ್ಲಾ ಪದ ಪ್ರಯೋಗ ಮಾಡಿದ್ದರು? ಏನೆಲ್ಲಾ ಹೇಳಿಕೆ ಕೊಟ್ಟಿದ್ದರು? ಬಹಿರಂಗವಾಗಿ ಬಂಡಾಯವೆದ್ದು ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಕಳೆದ 20 ವರ್ಷಗಳ ಕಾಲ ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಅಭಿವೃದ್ಧಿ ಬಗ್ಗೆ ಚಿಂತಿಸದೇ ಅಧಿಕಾರ ಅನುಭವಿಸಿದ ಸಿದ್ದೇಶ್ವರ ಅವರು ಯಾವ ಮುಖವಿಟ್ಟುಕೊಂಡು ಮತ ಕೇಳುತ್ತಾರೆ ಎಂಬುದು ಜನರ ಪ್ರಶ್ನೆಯಾಗಿದೆ. ಕೇವಲ ಮೋದಿ ಅವರ ಮುಖ ನೋಡಿ  ಮತ ಹಾಕಿ ಎನ್ನುವ ಸಿದ್ದೇಶ್ವರರು ಸಾಧನೆ ಮಾಡಿದ್ದನ್ನು ಕೇಳಿ ಮತಯಾಚನೆ ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳು, ಹೇಳಿಕೊಳ್ಳುವಂಥ ಯೋಜನೆಗಳನ್ನು ತರದ ಸಿದ್ದೇಶ್ವರ ಅವರು ತನ್ನ ಮುಖವಿಟ್ಟುಕೊಂಡು ಮತಯಾಚನೆ ಮಾಡಿದರೆ ಮತದಾರರು ಮತ ಹಾಕುವುದಿಲ್ಲ ಎಂಬುದು ಚೆನ್ನಾಗಿ ಗೊತ್ತು. ಹಾಗಾಗಿ, ಮೋದಿ ನೋಡಿ ಮತ ನೀಡಿ ಎಂದು ಹೇಳುತ್ತಿದ್ದಾರೆ. ಜನರು ಪ್ರಜ್ಞಾವಂತರು, ಬುದ್ದಿವಂತರಿದ್ದಾರೆ. ದುರಾಡಳಿತ, ಸ್ವಜನಪಕ್ಷಪಾತಕ್ಕೆ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರು, ಮುಖಂಡರೇ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ಖಚಿತ. ಕೆಲಸ ನೋಡಿ ವೋಟ್ ಕೊಡಿ ಎಂದು ಕೇಳುವುದನ್ನು ಬಿಟ್ಟು ಪದೇ ಪದೇ ಮೋದಿ ಅವರ ಹೆಸರು ಪ್ರಸ್ತಾಪಿಸುತ್ತಿರುವುದನ್ನು ನೋಡಿದರೆ ಸೋಲಿನ ಭಯ ಶುರುವಾದಂತೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.