ವಿದ್ಯುತ್ ಬಾಕಿ ವಸೂಲಿಗೆ ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ
ಕಲಬುರಗಿ,ಸೆ.21-ವಿದ್ಯುತ್ ಬಾಕಿ ವಸೂಲಿಗೆ ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಇಲ್ಲಿನ ಮಿಸ್ಬಾ ನಗರದ ಮರಪಳ್ಳಿ ಲೇಔಟ್ ಬಳಿ ನಡೆದಿದೆ.
ಜೆಸ್ಕಾಂನ ಹಡಗಿಲ್ ಹಾರುತಿ ಶಾಖೆ ಗ್ರಾಮೀಣ ಉಪ ವಿಭಾಗದಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ ಕಣ್ಣಿ ಎಂಬುವವರ ಮೇಲೆ ಸೈಯ್ಯದ್ ತಾಜೋದ್ದೀನ್ ತಂದೆ ಸೈಯ್ಯದ್ ನಬೀಸಾಬ್ ಎಂಬುವವರೆ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲಾಧಿಕಾರಿಗಳ ಆದೇಶದಂತೆ ಪ್ರತಿ ತಿಂಗಳು 15ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವ ಗ್ರಾಹಕರ ಮನೆಯ ವಿದ್ಯುತ್ ಕಡಿತ ಮಾಡಲಾಗುತ್ತದೆ. ಅದರಂತೆ ಸೆ.20 ರಂದು ಸಿಬ್ಬಂದಿ ಹಣಮಂತ ಅವರೊಂದಿಗೆ ಶಂಕರ ಅವರು ಮಿಸ್ಬಾ ನಗರ ಬಡಾವಣೆಯಲ್ಲಿ ವಿದ್ಯುತ್ ಬಾಕಿ ವಸೂಲು ಮಾಡುತ್ತ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಪಳ್ಳಿ ಲೇಔಟ್ ಹತ್ತಿರವಿರುವ ಮಹಿಬೂಬ್ ಎಂ.ವಡಕೇರಿ ಅವರ ಹೆಸರಿನಲ್ಲಿದ್ದ 2 ತಿಂಗಳ ವಿದ್ಯುತ್ ಬಾಕಿ 4966 ರೂ. ವಸೂಲಾತಿಗೆ ಹೋಗಿದ್ದಾರೆ. ಇವರ ಮನೆಯಲ್ಲಿ ಬಾಡಿಗೆಗಿರುವ ತಾಜೋದ್ದೀನ್ ಅವರಿಗೆ ಬಾಕಿ ಇರುವ ಬಿಲ್ ಪಾವತಿಸುವಂತೆ ತಿಳಿಸಿದ್ದಾರೆ. ಆಗ ತಾಜೋದ್ದೀನ್ ವಿದ್ಯುತ್ ಬಿಲ್ ಪಾವತಿ ಮಾಡಿರುವುದಾಗಿ ಹೇಳಿದ್ದು, ಬಿಲ್ ಪಾವತಿ ಮಾಡಿದ್ದರೆ ರಸೀದಿ ತೋರಿಸಿ ಎಂದು ಕೇಳಿದ್ದಾರೆ. ತಾಜೋದ್ದೀನ್ ಬಿಲ್ ತೋರಿಸಿಲ್ಲ. ಇದರಿಂದಾಗಿ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ವಿದ್ಯುತ್ ಸಂಪರ್ಕ ಕಡಿತ ಮಾಡಿದಕ್ಕೆ ಕೋಪಗೊಂಡ ತಾಜೋದ್ದೀನ್ ಶಂಕರ ಅವರನ್ನು ಅವಾಚ್ಯ ಶಬ್ಧಗಳಿಂದ ಬೈಯ್ದು ಹಾಕಿಸ್ಟಿಕ್‍ನಿಂದ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಶಂಕರ ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಸ್ಥಳಕ್ಕೆ ಆಗಮಿಸಿ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. 112 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಾಜೋದ್ದೀನ್‍ನನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯುತ್ ಬಾಕಿ ವಸೂಲಿಗೆ ಹೋದಾಗ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ಧಗಳಿಂದ ಬೈಯ್ದು, ಹಾಕಿಸ್ಟಿಕ್‍ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಸೈಯ್ಯದ್ ತಾಜೋದ್ದೀನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಶಂಕರ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.