ಹಾವುಗಳ ಪ್ರಭೇದ, ಹಾವು ಕಡಿತದ ತ್ವರಿತ ಚಿಕಿತ್ಸೆಕುರಿತು ಜಾಗೃತಿ ಮೂಡಿಸುತ್ತಿರುವ ಬಿಲ್ಲಾಡ
ಕಲಬುರಗಿ, ಸೆ.21- ಬಿಸಿಲು ನಾಡು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವ ವಿವಿಧ ಪ್ರಭೇದದ ಹಾವುಗಳ ಮಾಹಿತಿ ಮತ್ತು ಹಾವು ಕಡಿತದ ಬಳಿಕ ಕೈಗೊಳ್ಳಬೇಕಾದ ತುರ್ತು ಪ್ರಥಮ ಚಿಕಿತ್ಸೆಯ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರವೀಣಕುಮಾರ ಬಿಲ್ಲಾಡ ಅವರು, ಪರಿಸರ ಸ್ನೇಹಿ ಹಾವುಗಳ ರಕ್ಷಣೆಯಲ್ಲಿ ಕಳೆದ 22 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
ಕಲಬುರಗಿಯ ಪಿಡಿಎ ಇಂಜಿನಿಯರಿಂಗ ಕಾಲೇಜಿನ ಉದ್ಯೋಗಿಯಾಗಿರುವ ಅವರು, ಹಾವುಗಳ ಅಳಿವು ಉಳಿವಿನ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ಹವ್ಯಾಸವನ್ನು ಮೈಗೂಡಿಸಿ ಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನು ಪ್ರತಿವರ್ಷ ಸೆಪ್ಟೆಂಬರ 19ರಂದು ಆಚರಿಸಲಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ವಾರ್ಷಿಕ 45-54 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಸಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅವರಲ್ಲಿ 18 ರಿಂದ 27 ಲಕ್ಷ ಜನರು ಗುಣಮುಖರಾಗುತ್ತಾರೆ ಎಂಬ ವರದಿಗಳು ಹೇಳುತ್ತವೆ.
ಹಾವು ಕಡಿತದ ಪ್ರಕರಣಗಳಲ್ಲಿ ವಿಶೇಷವಾಗಿ ಹಳ್ಳಿಗಾಡಿನ ಜನರಲ್ಲಿರುವ ಮೌಢ್ಯತೆ ಗಿಡಮೂಲಿಕೆ, ಮಂತ್ರ ತಂತ್ರದ ಬಳಕೆಯ ಪರಿಣಾಮ ಸಾವಿನ ಸಂಖ್ಯೆಗಳು ಹೆಚ್ಚುತ್ತವೆ. ವಿಷ ಅಲ್ಲದ ಹಾವುಗಳ ಕಡಿತದಿಂದ ಪ್ರಾಣಕ್ಕೆ ಯಾವುದೇ ಹಾನಿ ಇರುವುದಿಲ್ಲ. ಗಿಡಮೂಲಿಕೆ ಮಂತ್ರ ತಂತ್ರದ ಕಾರಣದಿಂದ ತಾವು ಬದುಕುಳಿದಿರುವುದಾಗಿ ತಪ್ಪಾಗಿ ಭಾವಿಸಲಾಗುತ್ತದೆ.
ವಿಷಪೂರಿತ ಹಾವಿನ ಕಡಿತದಿಂದ ಆಗುವ ಸಾವಿನ ಪ್ರಮಾಣವನ್ನು ತಗ್ಗಿಸಲು ಅಂಬ್ಯುಲೆನ್ಸ್‍ಗೆ ಕರೆ ಮಾಡಿ ತುರ್ತಾಗಿ ಅಂದರೆ ಒಂದು ಗಂಟೆಯ ಒಳಗಾಗಿ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿ ನೀಡುವ ಚಿಕಿತ್ಸೆಯಿಂದ ಮಾತ್ರ ಜೀವದಾನ ದೊರೆಯಲಿದೆ ಎನ್ನುತ್ತಾರೆ ಬಿಲ್ಲಾಡ. ಅವರು, ಈ ಕುರಿತು ಕಲಬುರಗಿ, ಬೀದರ ಜಿಲ್ಲೆಗಳ ಶಾಲಾ ಕಾಲೇಜುಗಳಲ್ಲಿ ಹಾವುಗಳ ಕಡಿತದ ಕುರಿತು ಮಾಹಿತಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಭಾರತದಲ್ಲಿ ಸುಮಾರು 300 ಕ್ಕೂ ಅಧಿಕ ಪ್ರಭೇದಗಳಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸರಿಸುಮಾರು 27 ಬಗೆಯ ಹಾವುಗಳಿವೆ ಇವುಗಳಲ್ಲಿ ವಿಷಪೂರಿತ ಹಾವುಗಳಲ್ಲಿ ಕೊಳಕು ಮಂಡಲ, ರಕ್ತಮಂಡಲ, ಕಟ್ಟಾವು ಮತ್ತು ನಾಗರ ಹಾವುಗಳಾಗಿವೆ.
ಈ ಪ್ರದೇಶದಲ್ಲಿನ ಹಾವುಗಳ ಕುರಿತು ವಿದ್ಯಾರ್ಥಿಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ವಿಷಪೂರಿತ ಹಾವುಗಳ ಕಡಿತದಿಂದ ಆಗುವ ಪ್ರಾಣ ಹಾನಿಯನ್ನು ತಪ್ಪಿಸಲು ಮೊದಲು, ಹಾವು ಕಚ್ಚಿದ ಸ್ಥಳವನ್ನು ಸಾಬೂನು ನೀರಿನಿಂದ ಸ್ವಚ್ಛಗೊಳಿಸಿ, ಸಡಿಲವಾಗಿ ಬಟ್ಟೆಯನ್ನು ಕಟ್ಟಬೇಕು, ಅವರಲ್ಲಿರುವ ಭಯ ಮತ್ತು ಆತಂಕ ದೂರ ಮಾಡಲು ಧೈರ್ಯ, ಸಮಾಧಾನ ಪಡಿಸಬೇಕು, ತುರ್ತಾಗಿ ಅಂಬ್ಯುಲೆನ್ಸ್ ನಲ್ಲಿ ಆಗಲಿ ತಮ್ಮ ಬಳಿ ಲಭ್ಯ ಇರುವ ವಾಹನದ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಚಿಕಿತ್ಸೆಯ ಅರಿವು ಇಲ್ಲದೇ ಬಹುತೇಕರು ಹಾವು ಕಡಿತದಿಂದ ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ.
ಬೀದರ ಮತ್ತು ಕಲಬುರಗಿ ಜಿಲ್ಲೆಗಳ 15 ಶಾಲಾ ಕಾಲೇಜುಗಳಲ್ಲಿ, 32 ಹಳ್ಳಿಗಳಲ್ಲಿ, ಕೃಷಿ ಮೇಳಗಳಲ್ಲಿ ಹಾವುಗಳ ಕುರಿತು ಜಾಗೃತಿ ಕೈಗೊಳ್ಳಲಾಗಿದೆ. ಬಾಗಲಕೋಟೆಯಲ್ಲಿ ಜರುಗಿದ ಕೃಷಿಉತ್ಸವ ಮೇಳದಲ್ಲಿಯೂ ಭಾಗವಹಿಸಿ ಹಾವುಗಳ ಕುರಿತು ಮಾಹಿತಿ ನೀಡಲಾಯಿತು ಎನ್ನುವ ಅವರು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಶಿಬಿರ ಕೈಗೊಳ್ಳಲಾಗುತ್ತಿದೆ. ಅಳಂದ ಪಟ್ಟಣದ ಅನುಭವ ಮಂಟಪ ಶಾಲೆ, ಸಿದ್ದಲಿಂಗ ಶಿವಯೋಗಿಗಳ ಶಾಲೆ, ಚಿಂಚೋಳಿಯ ಲಿಟ್ಲ್ ಫ್ಲೋವೆರ್ ಶಾಲೆ, ಶಹಾಪುರದ ಸೆಂಟ್ ಫಿಟರ್ ಶಾಲೆ, ಕೋಟನೂರ ಡಿ ಯಲ್ಲಿರುವ ಸೆಂಟ್ ಮೇರಿ ಶಾಲೆ ಬಹುತೇಕ ಖಾಸಗಿ ಶಾಲಾ ಕಾಲೇಜುಗಳಲ್ಲಿ ಜೀವಂತ ಹಾವುಗಳೊಂದಿಗೆ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಲಾಗಿದೆ. ಸರ್ಕಾರಿ ಶಾಲಾ ಕಾಲೇಜಿನವರು ಆಹ್ವಾನಿಸಿದ್ದಲ್ಲಿ ಅಲ್ಲಿಯೂ ಇವುಗಳ ಕುರಿತು ಜಾಗೃತಿ ಶಿಬಿರ ನಡೆಸಲಾಗುವುದು ಎಂದು ಬಿಲ್ಲಾಡ ಅವರು, ಸಂಜೆವಾಣಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಹಾವು ಕಡಿತದಿಂದ ದೇಹದಲ್ಲಿ ಆಗುವ ವ್ಯತಿರಕ್ತ ಪರಿಣಾಮಗಳಾದ ಕಣ್ಣು ಮಂಜಾಗುವುದು, ವಾಂತಿ, ಮೂರ್ಛೆ ಹೋಗುವುದು, ಹೃದಯ ಬಡಿತ ಹೆಚ್ಚಾಗುವುದು, ನಾಲಿಗೆ ದಪ್ಪವಾಗಿ ಉಸಿರಾಟದಲ್ಲಿ ತೊಂದರೆಯಾಗುವುದು, ಸ್ನಾಯುಗಳ ಸೆಳೆತ ಅಲ್ಲದೇ ಹಾವು ಕಡಿತದ ಸ್ಥಳದ ಮೈಬಣ್ಣದಲ್ಲಿ ಬದಲಾವಣೆ ಕಾಣಿಸುತ್ತದೆ ಎನ್ನುತ್ತಾರೆ ಅವರು.
ವರ್ಷಕ್ಕೆ ಒಂದು ಇಲಿ ಸರಿಸುಮಾರು 300 ಮರಿಗಳನ್ನು ಹಾಕುತ್ತದೆ, ಪರಿಸರ ಸ್ನೇಹಿಯಾಗಿರುವ ಹಾವುಗಳಿಂದ ಯಾವುದೇ ಹಾನಿ ಇರುವುದಿಲ್ಲ. ಪರಿಸರದ ಸಮತೋಲನಕ್ಕೆ ಇವುಗಳ ಅಗತ್ಯ ಇರುತ್ತದೆ. ಅವುಗಳನ್ನು ಕೊಲ್ಲದೇ ತಮ್ಮ ಪಾಡಿಗೆ ಬಿಟ್ಟುಬಿಡಬೇಕು. ಮನೆಗಳಲ್ಲಿ ಹಾವುಗಳು ಕಂಡು ಬಂದಲ್ಲಿ ತಮ್ಮ ಮೊ: 9902389119 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟು ಬರಲಾಗುವುದು. ತಮ್ಮ ಈ ಕೆಲಸಕ್ಕೆ ಸಾಮಾಜಿಕ ಸಹಭಾಗಿತ್ವ ಅಗತ್ಯವಾಗಿದೆ ಎಂದು ಅವರು ಹೇಳುತ್ತಾರೆ..