ಹಾಡು ಹಗಲೇ ಮನೆ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಕಳವು
ಕಲಬುರಗಿ,ಸೆ.21-ಹಾಡು ಹಗಲೇ ಮನೆಯ ಹಿಂದಿನ ಬಾಗಿಲು ಬೀಗ ಮುರಿದು 1.05 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಆಳಂದ ರಸ್ತೆಯ ಬೆಣ್ಣೂರ ಲೇಔಟ್‍ನಲ್ಲಿ ನಡೆದಿದೆ.
ಶರಣಪ್ಪ ಬಡದಾಳ ಎಂಬುವವರ ಮನೆಯ ಹಿಂದಿನ ಬಾಗಿಲು ಬೀಗ ಮುರಿದು ಕಳ್ಳರು 20 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೇಟ್, 50 ಸಾವಿರ ರೂ.25 ಗ್ರಾಂ.ಬಂಗಾರದ 5 ಸುತ್ತುಂಗುರಗಳು, 20 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ 2 ಕಿವಿಯೋಲೆ, 15 ಸಾವಿರ ರೂ.ಮೌಲ್ಯದ 250 ಗ್ರಾಂ.ಬೆಳ್ಳಿ ಆರತಿ ಸೇರಿದಂತೆ 45 ಗ್ರಾಂ.ಬಂಗಾರದ ಮತ್ತು 250 ಗ್ರಾಂ.ಬೆಳ್ಳಿ ಆಭರಣ ಸೇರಿ ಒಟ್ಟು 1,05,000/-ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಸೆ.19 ರಂದು ಮುಂಜಾನೆ 10.15 ರಿಂದ 12 ಗಂಟೆಯ ಮಧ್ಯದ ಅವಧಿಯಲ್ಲಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.
ಮೊಬೈಲ್ ಕರೆಯಿಂದ ವಿಷಯ ಬೆಳಕಿಗೆ
ಶರಣಪ್ಪ ಬಡದಾಳ ಅವರ ಪತ್ನಿಯ ಮೊಬೈಲ್‍ಗೆ ಅವರ ಮನೆಯಲ್ಲಿ ಮಗನ ಹೆಸರಿನಲ್ಲಿದ್ದ ಮೊಬೈಲ್‍ನಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ರಿಂಗ್ ರೋಡ್ ಬಳಿ ಇರುವ ಫಿಲ್ಟರ್ ಹೌಸ್ ಹತ್ತಿರ ಈ ಮೊಬೈಲ್ ದೊರೆತಿದ್ದು, ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾನೆ. ಮನೆಯಲ್ಲಿರುವ ಮೊಬೈಲ್ ಹೊರಗಡೆ ಹೇಗೆ ಬಂತು ಎಂದು ಅವರು ಗಾಬರಿಯಾಗಿ ಪತಿ ಶರಣಪ್ಪ ಅವರಿಗೆ ಕರೆ ಮಾಡಿದ್ದಾರೆ. ಆಗ ಅವರು ಮನೆಗೆ ಹೋಗಿ ನೋಡಿದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.