ಸಿರಗಾಪುರ: ವೀರಭದ್ರೇಶ್ವರ ರಥೋತ್ಸವ 3 ರಂದು
ಕಲಬುರಗಿ: ಏ.30:ಕಮಲಾಪುರ ತಾಲೂಕಿನ ಸಿರಗಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ದಿ. ಮೇ 2 ರಿಂದ ಮೂರು ದಿನಗಳವರೆಗೆ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ಬಹುವಿಜೃಂಭಣೆಯಿಂದ ಜರುಗಲಿದೆ.
ದಿ. 2 ರಂದು ರಾತ್ರಿ 8 ಗಂಟೆಗೆ ಅಗ್ನಿಪೂಜೆ, ದಿ. 3 ರಂದು ಬೆಳಗ್ಗೆ 6 ಗಂಟೆಗೆ ವೀರಭದ್ರೇಶ್ವರ ಮಹಾಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ನಂತರ ಪಲ್ಲಕ್ಕಿ, ಪುರವಂತರೊಂದಿಗೆ ಅಗ್ನಿ ಪ್ರವೇಶ ನೆರವೇರಲಿದೆ. ದಿ. 3 ರಂದು ಸಂಜೆ 6 ಗಂಟೆಗೆ ಗುರುಪಾದಲಿಂಗ ಮಹಾಶಿವಯೋಗಿಗಳು, ವಿರೂಪಾಕ್ಷ ದೇವರು ಅಮೃತಹಸ್ತದಿಂದ ಭವ್ಯ ರಥೋತ್ಸವಕ್ಕೆ ಚಾಲನೆ ಸಿಗಲಿದೆ.
ನಂತರ ರಾತ್ರಿ 8 ಗಂಟೆಗೆ ಮುತ್ತ್ಯಾನ ಬಬಲಾದನ ಗುರುಪಾದಲಿಂಗ ಮಹಾಶಿವಯೋಗಿಗ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮುಗುಳನಾಗಾಂವ ಕಟ್ಟಿಮನಿ ಹಿರೇಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಅಧ್ಯಕ್ಷತೆವಹಿಸುವರು. ಅವರಾದ(ಬಿ) ಚರಂತಿಮಠ ಪೂಜ್ಯ ಮರುಳಸಿದ್ಧ ಶಿವಾಚಾರ್ಯರು ನೇತೃತ್ವವಹಿಸುವರು. ಮಹಾಗಾಂವ ಕಳ್ಳಿಮಠದ ಪೂಜ್ಯ ವಿರೂಪಾಕ್ಷ ದೇವರು, ನಾಗೂರಿನ ವಿರಕ್ತ ಮಠದ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಸಮ್ಮುಖವಹಿಸುವರು. ದಿ. 4 ರಂದು ಕುಸ್ತಿ, ಗೀಗಿ ಪದಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕುರಿಕೋಟಾ, ಅಂಕಲಗಾ, ಯಕ್ಕಂಚಿ, ಸಿರಾಡೋಣ, ತೊಂಡಕಲ್, ಚಿಂಚನಸೂರು, ಯಳವಂತಗಿ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ವಿವಿಧ ಸೇವಾ ಕಾರ್ಯಗಳು ನಡೆಸಿಕೊಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಆಗಮಿಸಿ ವೀರಭದ್ರೇಶ್ವರನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಸದ್ಭಕ್ತ ಮಂಡಳಿ ಪರವಾಗಿ ದೇವಸ್ಥಾನದ ಅರ್ಚಕ ಗುರುಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.