ಉತ್ಸಾಹದಿಂದ ಮತಚಲಾಯಿಸಲು ಕರೆ
ಬ್ಯಾಡಗಿ,ಏ..30: ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ನಮ್ಮ ನಡೆ ಮತಗಟ್ಟೆಯ ಕಡೆ ಧ್ಯೇಯದೊಂದಿಗೆ ಉತ್ಸಾಹದಿಂದ ಮತ ಚಲಾಯಿಸಬೇಕೆಂದು ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರಾದ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿ ಮತಗಟ್ಟೆಯಲ್ಲಿ ಚುನಾವಣೆ ಭಾವುಟ ಹಾರಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೇ ಮತದಾರರಿಗೆ ಮತಗಟ್ಟೆ ವಿಳಾಸ ತಿಳಿಸುವುದು ಮತ್ತು ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದಕ್ಕೆ ಪ್ರೇರೇಪಿಸುವುದು ಮುಖ್ಯ ಉದ್ದೇಶವಾಗಿದೆ. ಇಂದಿಲ್ಲಿ ಧ್ವಜಾರೋಹಣ ಮಾಡಲಾಗುವ ಧ್ವಜವು ಮತದಾನ ನಡೆಯೋವರೆಗೂ ಮತಗಟ್ಟೆಯಲ್ಲಿ ಹಾರಾಡಲಿದೆ. ಮತಗಟ್ಟೆಯ ಗುರುತಾಗಿ ಇದು ಬಿಂಬಿತವಾಗಲಿದೆ ಎಂದರು.
ತಾಲೂಕಿನ 21 ಗ್ರಾಮ ಪಂಚಾಯತಗಳ ಹಾಗೂ ಸರ್ಕಾರಿ ಶಾಲೆಗಳಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,
ಪ್ರತಿ ಬಾರಿಯ ಚುನಾವಣೆಯಲ್ಲೂ ಕಡಿಮೆ ಮತದಾನ ನಡೆಯುತ್ತದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ವ್ಯವಸ್ಥೆಗಳು ಇರಲಿದ್ದು, ಈ ಬಾರಿ ಹೆಚ್ಚು ಮತದಾನವಾಗಬೇಕು. ಎಲ್ಲರೂ ಒಟ್ಟಾಗಿ ಇತರರನ್ನೂ ಪ್ರೇರೇಪಿಸಿ ತಪ್ಪದೆ ಮತ ಚಲಾಯಿಸೇಕೆಂದು ತಿಳಿಸಿದರು.
ಅಕ್ಷರ ದಾಸೋಹಾಧಿಕಾರಿ ಎನ್.ತಿಮ್ಮಾರಡ್ಡಿ ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ `ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು. ಈ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿ ಎಂ.ಎ.ಅಗಸರ, ಪಿಡಿಓ ಸತೀಶ ಮೂಡೇರ, ಕಾರ್ಯದರ್ಶಿ ಕೃಷ್ಣ ಭಗವಂತಗೌಡ್ರ, ಅಕೌಂಟೆಂಟ್ ನಾಗಪ್ಪ ಪೀಠದ, ನರೇಗಾ ಯೋಜನೆಯ ಮಾಹಿತಿ ಸಂಯೋಜಕ ಅಕ್ಷಯ್ ದೇಶಪಾಂಡೆ ಸೇರಿದಂತೆ ಇತರರಿದ್ದರು.