ರೈಲಿನಿಂದ ಬಿದ್ದ ಪ್ರಯಾಣಿಕನಕುಟುಂಬಕ್ಕೆ ಪರಿಹಾರ ನೀಡಿ
ಬೆಂಗಳೂರು,ಏ.೩೦- ಓಡುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ ಪ್ರಯಾಣಿಕರ ಕುಟುಂಬಕ್ಕೆ ರೈಲ್ವೆ ಇಲಾಖೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ರೈಲಿನಿಂದ ಇಳಿಯುವ ವೇಳೆ ಅಪಘಾತದಲ್ಲಿ ಮೃತಪಟ್ಟ ಜಯಮ್ಮ ಎಂಬ ಪ್ರಯಾಣಿಕರ ಸಾವಿಗೆ ಪರಿಹಾರ ನೀಡಲು ರೈಲ್ವೆ ಪರಿಹಾರ ನ್ಯಾಯಮಂಡಳಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಶ್ನಿಸಿ ರಾಮನಗರ ಜಿಲ್ಲೆ ಚನ್ನಪಟ್ಟಣದ ನಿವಾಸಿ ರೋಜಾಮಣಿ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಆಲಿಸಿದ್ದಾರೆ. ಮೃತ ಮಹಿಳೆಯ ಕುಟುಂಬಕ್ಕೆ ವಾರ್ಷಿಕ ಶೇ.೭ರ ಬಡ್ಡಿಯೊಂದಿಗೆ ೪ ಲಕ್ಷ ರೂ. ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ. ಮುಂದೆ, ಚಲಿಸುವ ರೈಲಿನಿಂದ ಇಳಿಯುವಾಗ ಪ್ರಯಾಣಿಕರು ಸಾವನ್ನಪ್ಪಿದರೆ, ಹಕ್ಕುದಾರರಿಗೆ ಪರಿಹಾರವನ್ನು ನೀಡುವುದು ರೈಲ್ವೆಯ ಕರ್ತವ್ಯವಾಗಿದೆ ಎಂದು ಪೀಠವು ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತ ಜಯಮ್ಮ ತಪ್ಪಾಗಿ ತನ್ನ ಸಹೋದರಿಯೊಂದಿಗೆ ಬೇರೆ ರೈಲು ಹತ್ತಿದ್ದಾರೆ. ಈ ವಿಷಯ ತಿಳಿದು ಕೆಳಗೆ ಇಳಿಯುವಷ್ಟರಲ್ಲಿ ರೈಲು ಚಲಿಸಲಾರಂಭಿಸಿದೆ. ಆಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನು ಪರಿಗಣಿಸಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಆದಾಗ್ಯೂ, ಈ ಘಟನೆ ಆಕಸ್ಮಿಕವಲ್ಲ ಆದರೆ ಉದ್ದೇಶಪೂರ್ವಕವಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ, ಆದರೆ ಅದಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅರ್ಜಿದಾರರು ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ವಾದಿಸಿದ್ದರು.
ರೈಲ್ವೇ ಪರ ವಕೀಲರು ಮೃತ ಮಹಿಳೆ ತಪ್ಪಾಗಿ ಬೇರೆ ರೈಲು ಹತ್ತಿದ್ದಾರೆ ಎಂದು ವಾದಿಸಿದ್ದರು. ನಂತರ ರೈಲು ಚಲಿಸಲಾರಂಭಿಸಿದ್ದರಿಂದ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಾಯಿತು. ಇಲ್ಲವಾದರೆ ಅಲಾರಾಂ ಚೈನ್ ಎಳೆಯಬೇಕಿತ್ತು. ಎರಡನ್ನೂ ಮಾಡದೆ ಸ್ವಯಂಪ್ರೇರಣೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಹಾರಿ, ಚಲಿಸುವ ರೈಲಿನಿಂದ ಇಳಿಯಲು ಪ್ರಯತ್ನಿಸಿದ್ದಾರೆ ಹಾಗಾಗಿ ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಹೇಳಲಾಗದು. ಹಾಗಾಗಿ ರೈಲ್ವೆ ಕಾಯಿದೆಯ ಸೆಕ್ಷನ್ ೧೨೩(ಇ) ಅಡಿಯಲ್ಲಿ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
೨೦೧೪ರಲ್ಲಿ ಜಯಮ್ಮ ತನ್ನ ಸಹೋದರಿ ರತ್ನಮ್ಮ ಜತೆ ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿನ ಅಶೋಕಪುರಂಗೆ ತೆರಳಲು ತಿರುಪತಿ ಪ್ಯಾಸೆಂಜರ್ ರೈಲಿಗಾಗಿ ಕಾಯುತ್ತಿದ್ದರು. ಆಗ ಟುಟಿಕೋರಿನ್ ಎಕ್ಸ್ ಪ್ರೆಸ್ ರೈಲು ಬಂದಿದೆ. ಇಬ್ಬರೂ ಆ ರೈಲು ಹತ್ತಿದ್ದಾರೆ .ರೈಲು ಅಶೋಕಪುರಂಗೆ ಹೋಗುತ್ತಿಲ್ಲ ಎಂದು ತಿಳಿದ ಜಯಮ್ಮ ರೈಲಿನಿಂದ ಇಳಿಯ ತೊಡಗಿದ್ದು. ಅಷ್ಟರಲ್ಲಾಗಲೇ ರೈಲು ಚಲಿಸಲಾರಂಭಿಸಿದೆ, ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ರೈಲ್ವೆ ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿದೆ. ಇದನ್ನು ಪ್ರಶ್ನಿಸಿ ಮೃತರ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.