ದಮನಿತರ ಹೋರಾಟದ ಚೇತನ ಕಣ್ಮರೆ
ಸಂಜೆವಾಣಿ ನ್ಯೂಸ್
ಮೈಸೂರು : ಏ.30:- ರಾಜ್ಯದ ದಲಿತ ಸೂರ್ಯ ಎಂದೇ ಹೆಸರಾಗಿದ್ದ, ದಮ ನಿತರ ಹೋರಾಟದ ಚೇತನ, ಸ್ವಾಭಿಮಾನಿ ಕೊಂಡಿಯೊಂದು ಕಳಚಿದೆ. ತಳಮಟ್ಟದ ಜನರ ಅಭ್ಯುದಯಕ್ಕಾಗಿ ಹೋರಾಟ ನಡೆಸಿದ್ದ ಚೇತನವೊಂದು ಕಣ್ಮರೆಯಾಗಿದೆ. ತನ್ಮೂಲಕ ದಲಿತ ಅಸ್ಮಿತೆ ಮರೆಯಾಗಿದೆ.
ರಾಜ್ಯ ಕಂಡ ಅಜಾತಶತ್ರು ರಾಜಕಾರಣಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ತಮ್ಮ 50 ವರ್ಷಗಳ ಚುನಾವಣಾ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿಕೊಂಡೇ ಬಂದಿದ್ದರು. ತಮ್ಮ ಸ್ವಾಭಿಮಾನಕ್ಕೆ ಕಿಂಚಿತ್ತು ಧಕ್ಕೆ ಬರುವುದನ್ನು ಊಹಿಸಿದರೆ ಸಾಕು ಅರೆ ಕ್ಷಣವೂ ಆ ಜಾಗದಲ್ಲಿರು ತಿರಲಿಲ್ಲ. ಹಲವು ಪಕ್ಷಗಳಿಗೆ ಹೋದರೂ ತಾವು ನಂಬಿಕೊಂಡು ಬಂದಿದ್ದ ತತ್ತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಎಂದೂ ರಾಜಿಯಾಗುತ್ತಿರಲಿಲ್ಲ. ತಾವು ಇದ್ದ ಪಕ್ಷಗಳಲ್ಲಿ ಜನ ವಿರೋಧಿ ಕೆಲಸಗಳು ನಡೆದರೆ ತೀವ್ರವಾಗಿ ಖಂಡಿಸುತ್ತಿದ್ದರು. ಇದು ಸರಿಯಲ್ಲ ಎಂದು ಮೇಲ್ಮಟ್ಟದ ನಾಯಕರಿಗೆ ಚಾಟಿ ಬೀಸುತ್ತಿದ್ದರು.
ರಾಜಕಾರಣದಲ್ಲಿ ವಿಶಿಷ್ಟ ವ್ಯಕ್ತಿತ್ವ. ಸಮ ಸಮಾಜ ನಿರ್ಮಾಣದ ಕನಸು ಗಾರ, ಆ ಕನಸಿನ ನನಸಿಗಾಗಿ ಹೋರಾಟ, ಜಾತಿ ಆಧರಿತ ಮೇಲು-ಕೀಳೆಂಬ ಸಾಮಾಜಿಕ ಪಿಡುಗಿನ ವಿರುದ್ಧ ಸೆಟೆದು ನಿಲ್ಲುವ ನಾಯಕ ಇವರಾಗಿದ್ದರು.
ಪ್ರಸಾದ್ ಅವರು ಮೈಸೂರಿನ ಅಶೋಕಪುರಂನಲ್ಲಿ 06-08-1947ರಲ್ಲಿ ಜನಿಸಿದರು. ತಂದೆ ಎಂ. ವೆಂಕಟಯ್ಯ, ತಾಯಿ ಡಿ.ವಿ. ಪುಟ್ಟಮ್ಮ. ಇವರು ವೀಳ್ಯದೆಲೆ ಕೃಷಿಕರು. ಈ ದಂಪತಿಗೆ 6 ಮಕ್ಕಳು. ಪ್ರಸಾದ್ ಅವರೇ ದೊಡ್ಡವರು. ಇಬ್ಬರು ತಮ್ಮಂದಿರು, ಮೂವರು ಸಹೋದರಿಯರು.
ಪ್ರಸಾದ್ ಅವರು ಜುಲೈ 2 1978ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ದರು. ಮಡದಿ ಭಾಗ್ಯಲಕ್ಷ್ಮಿ ಹಾಗೂ ಮೂವರು ಹೆಣ್ಣುಮಕ್ಕಳ ತುಂಬು ಸಂಸಾರ ಪ್ರಸಾದ್ ಅವರದ್ದು. ಇವರು ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದವರಾಗಿದ್ದು, 50 ವರ್ಷಗಳ ಸುದೀರ್ಘ ರಾಜಕೀಯ ಜೀವನ ನಡೆಸಿದ್ದಾರೆ. ಇಡೀ ರಾಜಕೀಯ ಜೀವನದಲ್ಲಿ ರಾಜಕೀಯ ಮತ್ತು ವೈಯಕ್ತಿಕ ಜೀವನವನ್ನು ತಾವು ಧರಿಸುತ್ತಿದ್ದ ಬಿಳಿ ಬಟ್ಟೆಯಷ್ಟೇ ಶುಭ್ರವಾಗಿ ಇಟ್ಟುಕೊಂಡಿದ್ದರು. ಬಹಳ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದರು.
ಆರೆಸ್ಸೆಸ್‍ನಿಂದ ರಾಜಕೀಯದವರೆಗೆ :
ಮೈಸೂರಿನ ಅಶೋಕಪುರಂ ನಿವಾಸಿಯಾದ ಪ್ರಸಾದ್ ಅವರು ಇಲ್ಲಿ, ಸೀನಣ್ಣ ಎಂದೇ ಚಿರಪರಿಚಿತ ವಾಗಿದ್ದರು. ಇವರು ರಾಜ್ಯದ ದಲಿತ ನಾಯಕರಾಗಿ, ರಾಜಕೀಯ ಅಜಾತಶತೃವಾಗಿ ರೂಪುಗೊಂಡಿದ್ದೇ ಆರೆಸ್ಸೆಸ್ ಮುಂಚೂಣಿಯಿಂದ. ಇದನ್ನು ಸ್ವತಹ ಪ್ರಸಾದ್‍ಅವರೇ ಹಲವು ಬಾರಿ ಹೇಳಿಕೊಂಡಿದ್ದೂ ಇದೆ. 1967ರಲ್ಲಿ ಆರೆಸ್ಸೆಸ್ ಸೇರಿದ್ದ ಪ್ರಸಾದ್ ಅವರು ಮಾ. ವೆಂಕಟರಾಮು ಜೊತೆ ಕೆಲ ವರ್ಷಗಳ ಕಾಲ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಸಂಘಟನೆಯಿಂದ ಹೊರಬಂದ ಅವರು, ದಲಿತ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. 1974ರಲ್ಲಿ ಅರಸು ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ಬಸವಲಿಂಗಪ್ಪ ಅವರು ಬೂಸಾ ಚಳಿವಳಿಯನ್ನು ನಡೆಸಿದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡಬೇಕಾಯಿತು. ಆಗ, ದಲಿತ ಸಮುದಾಯ ಬೀದಿಗಿಳಿದು ಹೋರಾಟ ಶುರುಮಾಡಿತ್ತು. ಈ ಸಂದರ್ಭದಲ್ಲಿ ಯುವಕ ಶ್ರೀನಿವಾಸ ಪ್ರಸಾದ್ ಹೋರಾಟದ ಜೀವನಕ್ಕೆ ಕಾಲಿರಿಸಿದರು. ಇದೇ ಅವರಿಗೆ ಮುಂದಿನ ಉಜ್ವಲ ರಾಜಕೀಯ ಭವಿಷ್ಯಕ್ಕೆ
ಚಿಮ್ಮು ಹಲಗೆಯಾಗಿ ಮಾರ್ಪಟ್ಟಿತು. ಯೋಗಾ ಯೋಗಾ ಎನ್ನುವಂತೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಯಿತು. ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರೆ, ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿಯ ಮುಖಭಂಗವಾಗುತ್ತದೆ. ಇದರ ಪರಿಣಾಮ ಬಸವಲಿಂಗಪ್ಪ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಚಿಂತನೆ ಮಾಡಿದ್ದ ಪ್ರಸಾದ್, ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಉಪ ಚುನಾವಣೆಯ ಕಣ್ಣಕ್ಕಿಳಿದು ಸೋತರೂ ಉದ್ದೇಶ ಈಡೇರಿಸಿಕೊಂಡಿದ್ದರು.
ನೇರ ನಿಷ್ಟುರಿ ಪ್ರಸಾದ್ :
ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಯಾವುದೇ ಮೂಲೆಯಲ್ಲೇ ಆಗಲಿ, ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆದರೆ ಅದನ್ನು ಖಂಡಿಸುವವರು ನೇರ ನಿಷ್ಟುರ ಮಾತುಗಳಲ್ಲಿ ಶ್ರೀನಿವಾಸಪ್ರಸಾದ್ ಒಬ್ಬರೇ. ಉಳಿದ ದಲಿತ ನಾಯಕರು ತಮ್ಮ ಪ್ರತಿಕ್ರಿಯೆಯಿಂದ ಉಂಟಾಗಬ ಹುದಾದ ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಆದರೆ ಅದ್ಯಾವುದನ್ನೂ ಲೆಕ್ಕಿಸದೆ, ಜನಾಂಗದ ಮೇಲಿನ ನೈಜ ಕಳಕಳಿ ಯಿಂದ ಮಾತನಾಡುವ ಛಾತಿ ಪ್ರಸಾದ್ ಹೊರತುಪಡಿಸಿ, ಪ್ರಸ್ತುತ ಯಾವ ದಲಿತ ನಾಯಕರಿಗೂ ಇಲ್ಲ ಎಂಬುದನ್ನು ಅವರ ಶತ್ರುಗಳೂ ಒಪ್ಪುತ್ತಾರೆ. ತಮ್ಮ ಅನುಭವ, ಸಂಪರ್ಕದಿಂದ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಅವಕಾಶವಿತ್ತಾದರೂ, ಅನಾರೋಗ್ಯ ಪ್ರಸಾದ್‍ನ್ನು ಬಾಧಿಸಿತ್ತು.
ಜೀವನದ ಮಹತ್ವದ ಘಟ್ಟಗಳು :
ಶ್ರೀನಿವಾಸಪ್ರಸಾದ್ ಅವರ ಸಾರ್ವಜನಿಕ ಜೀವನದಲ್ಲಿ 1993 ಮತ್ತು ರಾಜಕೀಯ ಜೀವನದಲ್ಲಿ 1996 ಮಹತ್ವದ ಘಟ್ಟಗಳು, ಬದನವಾಳು ಗ್ರಾಮದಲ್ಲಿ 1993ರ ಮಾರ್ಚ್ 25ರಂದು ನಡೆದ ಜಾತಿ ಸಂಘರ್ಷದಲ್ಲಿ ಹಾಡಹಗಲೇ ಮೂವರು ದಲಿತರ ಕಗ್ಗೋಲೆಯಾಯಿತು. ಆಗ ತೆಗೆದುಕೊಂಡ ನಿಲುವು ಅವರನ್ನು ದಲಿತರ ಪ್ರಶ್ನಾತೀತ ನಾಯಕರನ್ನಾಗಿ ರೂಪಿಸಿತು. ದಲಿತರ ಸಾಮೂಹಿಕ ಹತ್ಯೆ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿ, ಎಲ್ಲ ಅಪರಾಧಿಗಳಿಗೂ ಶಿಕ್ಷೆ ಆಗುವಂತೆ ನೋಡಿಕೊಳ್ಳುವಲ್ಲಿ ಪ್ರಸಾದ್ ಪಟ್ಟು ಹಿಡಿದು ಯಶಸ್ವಿಯಾದರು. ಬಳಿಕ ನಡೆದ 1996ರ ಚುನಾವಣೆಯಲ್ಲಿ ಇದೇ ಕಾರಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಟಿಕೆಟ್ ನಿರಾಕರಿಸಿತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ನಾನು ಪಕ್ಷಾಂತರಿ, ತತ್ವಾಂತರಿ ಅಲ್ಲ :
ನಾನು ಪಕ್ಷಾಂತರಿ ಆಗಿರಬಹುದು, ಆದರೆ ತತ್ವಾಂತರಿ ಅಲ್ಲ ಈ ಮಾತನ್ನು ಶ್ರೀನಿವಾಸಪ್ರಸಾದ್ ಪದೇ ಪದೆ ಪುನರುಚ್ಚರಿಸುತ್ತಿದ್ದರು. ಇದಕ್ಕೆ ಕಾರಣ, ಅವರು ಬಿಜೆಪಿ ಸೇರಿದ್ದು, ತಾನು ಡಾ.ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ ಎಂದು ಪ್ರಸಾದ್ ಹೇಳಿಕೊಂಡಿದ್ದರು.
ರಾಜಕೀಯ ಸುವರ್ಣ ಮಹೋತ್ಸವ :
ಸಂಸದ ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಮತ್ತು ಅಭಿನಂದನಾ ಸಮಾರಂಭವನ್ನು ಮಾ.17ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಆಚರಿಸಿಕೊಂಡಿದ್ದರು. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿಕೊಂಡಿದ್ದರು.