ಆಲಗೂರ ಗೆಲವು ಸೂರ್ಯ, ಚಂದ್ರರು ಉದಯಿಸಿದಷ್ಟೇ ಸ್ಪಷ್ಟ: ಲಕ್ಷ್ಮಣ ಸವದಿ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.30:ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿಗಳನ್ನು ನೀಡಿದಂತೆ ಅಧಿಕಾರಕ್ಕೆ ಬಂದ ನಂತರ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಕಡೆಗೆ ಜನರ ಒಲವು ಹೆಚ್ಚಿದೆ. ರಾಜ್ಯದ 20 ಸ್ಥಾನಗಳಲ್ಲಿ ಗೆಲವು ನಿಶ್ಚಿತ ಎಂದರು.
ಮೂರು ಬಾರಿ ಆಯ್ಕೆಯಾಗಿದ್ದ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಜಿಗಜಿಣಗಿ ವಿರೋಧ ಅಲೆ ಇದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲವು ಖಚಿತವಾಗಿದೆ. ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲವು ಸೂರ್ಯ ಚಂದ್ರ ಉದಯಿಸಿದಷ್ಟೇ ಸ್ಪಷ್ಟವಾಗಿದೆ. ಸುಮಾರು 1 ಲಕ್ಷ ಮತಗಳ ಅಂತರದಿಂದ ಆಲಗೂರ ಗೆಲವು ಖಚಿತವಾಗಿದೆ ಎಂದು ಹೇಳಿದರು.
ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್ಸು ತರುವ ಪ್ರಚಾರ, ಈ ಹಣ ತಂದರೆ ಬಂಗಾರದ ರಸ್ತೆಯಾಗಿ ಪರಿವರ್ತಿಸುವ ಸುಳ್ಳು ಭರವಸೆ, ಮೂರು ಕೋಟಿ ಉದ್ಯೋಗ ಸೃಜನೆ, ಬೆಲೆ ಏರಿಕೆ ನಿಯಂತ್ರಣ, ರೈತರ ಆದಾಯ ದ್ವಿಗುಣದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿತು. ಆದರೆ ಇದನ್ನು ಯಾವುದೇ ರೀತಿಯಲ್ಲೂ ಈಡೇರಿಸದ ಬಿಜೆಪಿ ನೈಜ ಬಣ್ಣ ಬಯಲಾಗಿದೆ. ಬಿಜೆಪಿಯ ಬಗ್ಗೆ ಜನತೆಗೆ ಭ್ರಮನಿರಸನವಾಗಿದೆ. ಆಡಳಿತ ವಿರೋಧಿ ಅಲೆ ಪ್ರಬಲವಾಗಿ ಬೀಸುತ್ತಿದೆ ಎಂದರು.
ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ, ಜಿಎಸ್.ಟಿ ಪರಿಹಾರ ಹಣ, ಮಹದಾಯಿ ಯೋಜನೆ ಬಗ್ಗೆ ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು ಒಂದೇ ಒಂದು ಬಾರಿ ಮಾತನಾಡಿಲಿಲ್ಲ ಎಂಬುದು ನೋವಿನ ಸಂಗತಿ ಎಂದರು.
ಮಹಾದಾಯಿ ಯೋಜನೆಗಾಗಿ ಹಸಿರು ಶಾಲು ಹಾಕಿ ಹೋರಾಟ ಮಾಡಿದ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾದರೂ ಸಹ ಈ ಯೋಜನೆ ಈಡೇರಿಸಿಲಿಲ್ಲ, ಇದು ಒಂದು ರೀತಿ ತಲೆ ತಗ್ಗಿಸುವ ಸನ್ನಿವೇಶ, ಹೀಗಾಗಿ ಬಿಜೆಪಿ ವರ್ತನೆ ಗಮನಿಸಿರುವ ಜನತೆ ಬಿಹೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ಆಳ ಅಗಲ ಗೊತ್ತಿದೆ
ನಾನು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿದ್ದೆ. ಬಿಜೆಪಿಯ ಆಳ ಅಗಲ ನೋಡಿದ್ದೇನೆ, ಚುನಾವಣೆ ಬಂದಾಗ ಜಾತಿ, ಜಾತಿ ನಡುವೆ ವೈಷಮ್ಯ ಬಿತ್ತುವುದು ಬಿಜೆಪಿ ಸ್ವಭಾವ, ಇದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಸವದಿ ಹೇಳಿದರು.
ಕಳೆದ ಚುನಾವಣೆಯಲ್ಲಿ ಜನರು ಬಿಜೆಪಿಗೆ ಚೊಂಬು ನೀಡಿದ್ದಾರೆ. ಈ ಬಾರಿಯೂ ಅಷ್ಟೇ, ಈ ಚೊಂಬು ಹಿಡಿದುಕೊಂಡು ಶ್ರೀರಾಮಲು ಓಡಾಡಬೇಕಾದೀತು ಎಂದು ಸವದಿ ರಾಮಲು ಅವರ ಹೇಳಿಕೆಗೆ ಟಾಂಗ್ ನೀಡಿದರು.
ಜಿಎಸ್ ಟಿ ಪರಿಹಾರ ಹಣ ರಾಜ್ಯಕ್ಕೆ ಬರಬೇಕಾಗಿರುವುದು ನಮ್ಮ ಹಕ್ಕು, ಅದು ನಮ್ಮ ಹಣ ಅದು ಕೇಂದ್ರ ನೀಡುವ ಭಿಕ್ಷೆಯಲ್ಲ, ಈ ಹಣ ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಯಿತು ಎಂದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಮೋದಿಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸವದಿ, ಈ ಹಿಂದೆಯೂ ಪ್ರಧಾನಿ ಈ ರೀತಿ ಹೇಳಿಕೆ ನೀಡಿದ್ದಾರೆ. ಬಡವರಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಇದು ಮೋದಿಜಿ ಅವರಿಗೆ ಸಹನೆಯಾಗುತ್ತಿಲ್ಲ ಎಂದರು.
ನನಗೆ ಬಿಜೆಪಿಯವÀರು ಉಪಮುಖ್ಯಮಂತ್ರಿ ಕೊಟ್ಟರೂ ಆದರೆ ಕಸಿದುಕೊಂಡಿದ್ದು ಏಕೆ? ನನ್ನ ವಿರುದ್ಧ ಸಿ.ಡಿ. ಇರಲಿಲ್ಲ. ಹಗರಣದ ಆರೋಪ ಕೂಡಾ ಇರಲಿಲ್ಲ. ಆದರೂ ಉಪ ಮುಖ್ಯಮಂತ್ರಿ ಕಸಿದುಕೊಂಡು ನನಗೆ ಅನ್ಯಾಯ ಮಾಡಿದರು ಎಂದರು.
ಕಾಂಗ್ರೆಸ್ ನನಗೆ ಗೌರವ ನೀಡಿದೆ. ಮನೆಗೆ ಬಿ ಫಾರ್ಮ್ ಕೊಟ್ಟು ಕಳುಹಿಸಿದೆ. ಹೆಲಿಕ್ಯಾಪ್ಟರ್ ಮೂಲಕ ನನ್ನನ್ನು ಕರೆಯಿಸಿಕೊಂಡು ಸ್ವಾಗತಿಸಿದೆ. ಹೀಗಾಗಿ ಬಿಜೆಪಿಯವರು ನನ್ನ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದರು.
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುರೇಶ ಗೊಣಸಗಿ, ಮಹಾದೇವಿ ಗೋಕಾಕ, ವಸಂತ ಹೊನಮೋಡೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.