ಹೋಮ್ ಬೇಸ್ಡ್ ವೋಟಿಂಗ್:ಕ್ಷೇತ್ರದಾದ್ಯಂತ ಶೇ.93.39 ರಷ್ಟು ಮತದಾನ:ಬಿ.ಫೌಜಿಯಾ ತರನ್ನುಮ್
ಕಲಬುರಗಿ,ಏ.29: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಸೋಮವಾರ ಕೊನೆಗೊಂಡಿದ್ದು, ಗುಲಬರ್ಗಾ ಲೋಕಸಭಾ ಕ್ಷೇತ್ರದಾದ್ಯಂತ ಶೇ.93.39 ರಷ್ಟು ಮತದಾನವಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಕ್ಷೇತ್ರದಾದ್ಯಂತ 85 ವರ್ಷ ಮೇಲ್ಪಟ್ಟ 1,059 ಮತ್ತು 384 ವಿಶೇಷಚೇತನರು ಸೇರಿದಂತೆ ಒಟ್ಟಾರೆ 1,443 ಜನ ಮತದ ಹಕ್ಕು ಚಲಾಯಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಕ್ರಮವಾಗಿ ಅಫಜಲಪೂರ ಕ್ಷೇತ್ರದಲ್ಲಿ 158 ಮತ್ತು 85, ಚಿತ್ತಾಪೂರ ಕ್ಷೇತ್ರದಲ್ಲಿ 23 ಮತ್ತು 15, ಗುಲಬರ್ಗಾ ದಕ್ಷಿಣ ಕ್ಷೇತ್ರದಲ್ಲಿ 138 ಮತ್ತು 28, ಗುಲಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿ 141 ಮತ್ತು 40, ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ 113 ಮತ್ತು 20, ಜೇವರ್ಗಿ ಕ್ಷೇತ್ರದಲ್ಲಿ 143 ಮತ್ತು 73, ಸೇಡಂ 187 ಮತ್ತು 89 ಹಾಗೂ ಗುರುಮಠಕಲ್ 156 ಮತ್ತು 34 ಜನ ಮತ ಚಲಾಯಿಸಿದ್ದಾರೆ.
ಗುಲಬರ್ಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,233 ಹಿರಿಯ ನಾಗರೀಕರು ಮತ್ತು 22,123 ವಿಶೇಷ ಚೇತನರಿದ್ದು, ಇದರಲ್ಲಿ 1,149 ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಸೇರಿದಂತೆ ಒಟ್ಟು 1,545 ಜನ ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದರು.