ಪ್ರಜ್ವಲ್ ಪ್ರಕರಣ: ಮೋದಿ ವಿರುದ್ಧ ಪ್ರಿಯಾಂಕ್ ವಾಗ್ದಾಳಿ
ಕಲಬುರಗಿ,ಏ.29: ಪ್ರಜ್ವಲ್ ರೆವಣ್ಣ ರಾಸಲೀಲೆ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡದೆ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದ ಬಗ್ಗೆ ಮಾಹಿತಿ ಇದ್ದ ಕಾರಣಕ್ಕೆ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಹಾಸನದ ಸ್ಥಳೀಯ ಮುಖಂಡರು ಪತ್ರ ಬರೆದಿದ್ದರು. ಬಿಜೆಪಿ ಮುಖಂಡ ದೇವರಾಜಗೌಡ ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಷ್ಟಾದರೂ ಮಾಜಿ ಪ್ರಧಾನಿ ದೇವೆಗೌಡರು ಸೇರಿದಂತೆ ಇಡೀ ಕುಟುಂಬ ಪ್ರಧಾನಿ ಅವರನ್ನು ಭೇಟಿಯಾಗಿ ಟಿಕೆಟ್ ಕೊಡಿಸಿದೆ.
ಅಲ್ಲಿನ ಮಾಜಿ ಶಾಸಕ ಪ್ರೀತಂಗೌಡ, ಎ.ಟಿ.ರಾಮಸ್ವಾಮಿ ಕೂಡ ವಿರೋಧ ಮಾಡಿದ್ದರೂ ಅವರ ಮಾತಿಗೆ ಬೆಲೆ ಕೊಡದೆ ಪ್ರಜ್ವಲ್ ಅವರಿಗೆ ಟಿಕೆಟ್ ದೊರೆಯುವಂತೆ ನೋಡಿಕೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರಧಾನಿ ಮೋದಿ ಅವರಿಗೆ ಮಾಹಿತಿ ಇದ್ದರೂ ಬಾಯಿ ಬಿಡುತ್ತಿಲ್ಲ ಎಂದರು.
ಪ್ರಧಾನಿ ಮೋದಿಯವರು ಬೇಟಿ ಬಚಾವ್ ಭೇಟಿ ಪಡಾವ್ ಎನ್ನುತ್ತಾರೆ. ಪ್ರಜ್ವಲ್ ವಿಷಯದಲ್ಲಿ ಈ ಬದ್ಧತೆ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.
ಹೆಚ್ ಡಿಕೆ ರಾಜ್ಯದ ಮಹಿಳೆಯರಿಗೆ ದಾರಿ ತಪ್ಪಿದವರು ಎನ್ನುತ್ತಾರೆ. ಈ ಮಧ್ಯೆ ತಮ್ಮ ಮನೆಯ ಮಗನೇ ದಾರಿ ತಪ್ಪಿದ್ದನ್ನು ಕುಮಾರಸ್ವಾಮಿ ಮುಚ್ಚಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಎಲ್ಲಾ ಗೊತ್ತಿದ್ದರೂ ಎಲ್ಲವನ್ನ ಮುಚ್ಚಿ ಹಾಕಬಹುದು ಅಂದುಕೊಂಡಿದ್ದಾರೆ. ಮೋದಿಯವರ ರಕ್ಷಣೆ ಇತ್ತು ಅಂತ ಇಷ್ಟೆಲ್ಲಾ ಮಾಡಿದರಾ ಎಂದು ಮರು ಪ್ರಶ್ನೆ ಹಾಕಿದರು.ಮಂಗಳಸೂತ್ರದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಪ್ರಜ್ವಲ್ ರಾಸಲೀಲೆ ಕುರಿತು ಕೂಡಲೆ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.ಪ್ರಧಾನಿ ಮೋದಿ ರಾಜ್ಯದಲ್ಲೇ ಇದ್ದಾರೆ. ಹಾಗಾಗಿ ತಮ್ಮ ಸಂಸದರ ರಾಸಲೀಲೆ ಬಗ್ಗೆ ಉತ್ತರ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ತಾಕೀತು ಮಾಡಿದರು.
ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದಲ್ಲಿ ನೀತಿ ಸಂಹಿತೆ ಮೀರಿ ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರು ಪ್ರಜ್ವಲ್ ರಾಸಲೀಲೆ ಪ್ರಕರಣ ಕುರಿತು ಏಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಆರ್ ಅಶೋಕ್ ಹಾಸನಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ನಿಲ್ಲಬೇಕು ಎಂದರು.ಕೇಂದ್ರ ಸರ್ಕಾರವೇ ಪ್ರಜ್ವಲ್ ಅವರನ್ನು ವಿದೇಶಕ್ಕೆ ಕಳಿಸಿದೆ ಎಂಬ ಆರೋಪವಿದೆ.
ಇದಕ್ಕೆ ಬಿಜೆಪಿಯವರು ಸ್ಪಷ್ಟೀಕರಣ ನೀಡಬೇಕು. ಜೊತೆಗೆ, ಮೋದಿಯವರು ಹುಬ್ಬಳ್ಳಿಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಅದೇರೀತಿಹಾಸನ ಪ್ರಕರಣದ ಬಗ್ಗೆ ಸಹ ಮಾತನಾಡಬೇಕು ಎಂದು ತಾಕೀತು ಮಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರಕಾರ ಎಸ್.ಐ.ಟಿ.ಗೆ ನೀಡಿದೆ. ಇನ್ನೊಂದೆಡೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಎಲ್ಲಾ ಗೊತ್ತಿದ್ದಾಗ್ಯೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎನ್.ಐ.ಎ ಏನು ಮಾಡುತ್ತಿದೆ?
ಪ್ರಧಾನಿ ಮೋದಿಯವರು ಓಲೈಕೆ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಐಸಿಎಸ್ ಯಾರ ಕಾಲದಲ್ಲಿ ಬೆಳೆದಿದ್ದು? ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಬಾಂಬರ್ ತರಬೇತಿ ಪಡೆದಿದ್ದು ಎಲ್ಲಿ ಎಂಬುದು ಕೇಂದ್ರ ಸರಕಾರ ವ್ಯಾಪ್ತಿಯ ಎನ್.ಐ.ಎ.ಗೆ ಏಕೆ ಮಾಹಿತಿ ಇರಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ವ್ಯಕ್ತಪಡಿಸಿದರು.ಇಷ್ಟಕ್ಕೂ ಕೆಫೆ ಬಾಂಬರ್ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ತರಬೇತಿ ಪಡೆದಿದ್ದರೆ ಈ ಕುರಿತುಎನ್ ಐಎ, ಕೇಂದ್ರ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.ಇಲ್ಲಿಯವರೆಗೆ ರಾಜ್ಯಗಳಿಗೆ ಎನ್.ಐ.ಎ ಏನೇನು ಮಾಹಿತಿ ನೀಡಿದೆ ಎಂದು ಪ್ರಶ್ನಿಸಿದರಲ್ಲದೆ, ಎಲ್ಲೆಲ್ಲಿ ಭಯೋತ್ಪಾದನಾ ಚಟುವಟಿಕೆ ನಡಡಯುತ್ತಿದೆ ಎನ್ನುವ ಮಾಹಿತಿ ಏಕೆ ಕ್ರೋಢೀಕರಿಸಿಲ್ಲ ಎಂದರು.ಹಾಗಾದರೆ ಇವರೆಲ್ಲಾ ಕತ್ತೆ ಕಾಯುತ್ತಿದ್ದರಾ ಎಂದು ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.